(ಆ). ವಿವಿಧ ದೇವತಾ ಸ್ತುತಿ
ರುದ್ರದೇವರು
ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ
ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ
ಒಪ್ಪುವ ಶಿರದೊಳಗೆ
ಸರ್ಪನ ಮೇಲೊರಗಿಪ್ಪನ ಮಗಳನ್ನು
ಒಪ್ಪದಿ ಧರಿಸಿದನ 1
ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ
ಕಪ್ಪುಕೊರಳ ದೇವನ
ರೌಪ್ಯದ ಪುರವರಧೀಶನೆಂದೆನಿಸಿಯೆ
ಇಪ್ಪಂಥ ಪರಶಿವನ 2
ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ
ಕರಿಚರ್ಮ ಪೊದ್ದವನ
ಗರುಡನ ಭಯಕಂಜಿ ಮೊರೆಹೊಕ್ಕ ಶರಣನ
ಕರುಣದಿ ಕಾಯ್ದವನ 3
ಉರಗಾಭರಣವ ಸುತ್ತಿಕೊಂಡಿರುವಂಥ
ಗರುವ ದೇವರ ದೇವನ
ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ
ಬಿರುದುಳ್ಳ ಪರಶಿವನ 4
ದ್ವಾರಕಿವಾಸನಾಚಾರ್ಯನ ಮುಖದಿಂದ
ಸೇರಿಸಿಕೊಂಡವನ
ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ
ಚಾರವ ತೋರಿದನ 5
ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ
ಹಾರಿಸಿ ತರಿದವನ
ಸಾರಿದ ಭಕ್ತರ ಸಲುಹುತ್ತ ಮುಂದಣ
ದಾರಿಯ ತೋರ್ಪವನ 6
ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ
ಅರ್ತಿಯಿಂ ನಲಿವವನ
ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು
ಕೀರ್ತಿಯ ಪೊತ್ತವನ 7
ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ
ಮೃತ್ಯುವನೊಟ್ಟಿದನ
ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ-
ಯುತ್ತಲಿರ್ಪವನ 8
ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ
ಉಡುಪಿನ ಸ್ಥಳವೆಂಬುದು
ಪಡುವಲು ಮೂಡಲು ಎರಡಾಗಿ ತೋರುವ
ಒಡಲೊಂದೆ ಮೃಡನೊಬ್ಬನೆ 9
ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ
ಪೊಡವಿಯುತ್ತಮವಾದುದು
ಬಡವರ ಬಡತನ ಉಡು (ಪಿಯ)1 ಕಾಣಲು
ಸಡಲಿತು ಸುಲಭದಲಿ 10
ಚಿಂತೆಗಳೆನ್ನನು ಭ್ರಾಂತಿ(ಬ)2 ಡಿಸುತಿದೆ
ಅಂತಕಾಂತಕ ಲಾಲಿಸು
ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ
ಸಂತೋಷವನು ಪಾಲಿಸು 11
ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ-
ವಾಂತದಿ ನೀ ಹಾರಿಸು
ಸಂತತ ಎನ್ನನು ಸಲಹಯ್ಯ ಪಾರ್ವತೀ
ಕಾಂತನೆ ಕಡೆ ಸೇರಿಸು 12
ಹರ ಹರ ಮಹಾದೇವ ಪರದೈವ ಶಂಕರ
ಮೆರೆವ ಆ ವೃಷಭಧ್ವಜ
ವರದ ಕೃತ್ತೀವಾಸ ಸ್ಮರನಾಶ ದೇವೇಶ
ಸಿರಿಕಂಠ ಪುರಹರನೆ 13
ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ
ಸ್ಥಿರವಾದ ಶಿವಬೆಳ್ಳಿಯ
ಪುರಪತಿ ಅನಂತೇಶ ವರಾಹತಿಮ್ಮಪ್ಪನ
ಸರಿಯೆಂದು ತೋರ್ಪವನ14