ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೋಗಣೆಯ ಮಾಡೋ ವಾರಿಜರಮಣಾ| ಸಾರಿದವರಿಗೆ ಅಭಯವನೀವಕರುಣಾ ಪ ಪೊಂಬ್ಹರಿವಾಣದಿ ರನ್ನಬಟ್ಟಲುಗಳು| ಅಂಬುಜಾನನರಿಸಿ ಲಕುಮಿಯವೆರಸಿ 1 ಪರಿಪರಿ ಮಾವಿನ ತನಿವಣ್ಗಳ ನೋಡಿ| ಮೆರೆವ ಸುದ್ರಾಕ್ಷ ದಾಳಿಂಬರ ಸವಿಯಾ 2 ಶಾಲ್ಯೋದನ್ನದಿ ಸುಘೃತ ಪರಿಪರಿಯ ವಿ| ಶಾಲ ಶಾಖಂಗಳ ಸವಿಯನೆ ಕೊಳುತಾ 3 ಪಂಚ ಭಕ್ಷ್ಯವು ಕೆನೆವಾಲು ಸೀಕರಣಿಯು| ಮುಂಚೆ ಶರ್ಕರದ ಪಾಯಸ ಪರಿಪರಿಯ 4 ದಧ್ಯೋದನ್ನದಲುಹಗಾಯಿ ಸ್ವಾದಿಸುತಾ| ಸದ್ವಿದ್ಯದ ಮನ ಕಲ್ಪತರುವೆಲ್ಲಾ 5 ಪತ್ರಸುಮನ ಫಲತೋಯಭಕ್ತರುಕೊಟ್ಟ| ರರ್ಥಿಲಿ ಕೊಂಬೊ ದಯಾಳುತನದಲ್ಲಿ6 ತಂದೆ ಮಹೀಪತಿ ನಂದನ ಸಾರಥಿ| ಎಂದೆಂದು ಸ್ಮರಣೆಗೊದಗಿ ಮುದ್ದು ಮುಖದಿ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರೋಗಣೆಯ ಮಾಡೋ ಮುಕುಂದಾ ಪ ಆರೋಗಣೆಯ ಮಾಡೋ ವಾರಿಜರಮಣಾ ಸಾರಿದವರಿಗೆ ಭಯನಿವಾಕರದಿ 1 ಪೊಂಬ್ಹರಿವಾಣದಿರನ್ನ ಬಟ್ಟಲುಗಳು ಅಂಬುಜಾನನಸಿರಿ ಲಕುಮಿಯವೇರಿಸಿ 2 ಶಾಲ್ಯೋದನಸೂಪಘೃತ ಪರಿಪರಿಯಾ ಶಾಲ್ಯಾಶಾಖಂಗಳಸವಿಯನೆ ಕೊಳುತಾ3 ಪಂಚಭಕ್ಷವು ಕೆನೆಹಾಲು ಸೀಖರಿಣಿಯಾ ಮುಂಚೆ ಪಾಯಸಪರಿಪರಿಶರ್ಕರದಲಿ4 ದದ್ಯೋದನದಲುಪಗಾಯಿಸ್ವಾದಿಸುತ ದಮನ ಕಲ್ಪಿತರುವೆಲ್ಲಾ5 ಪತ್ರಸುಮನತೋಯ ಭಕ್ತರು ಕೊಟ್ಟು ದರ್ಥಲಿ ಕೊಂಬ ದಯಾಳುತನದಲಿ6 ತಂದೆ ಮಹಿಪತಿ ನಂದನ ಸಾರಥಿ ಎಂದೆಂದು ಸ್ಮರಣೆ ಗೊದಗಿ ಮುದ್ದು ಮುಖದಿ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು