ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ
ಎಂತುನುತಿಪೆ ನಾನು ಈ ಜಗದಂತರ್ಯಾಮಿಯನು ಪ ಪರಿಯವು ಸಂತತ ವಾಙ್ಮನ ಅ.ಪ ಸಾಸಿರಮುಖದವನ ಅವಯವಸಾಸಿರವುಳ್ಳವನ ಮೀಸಲಳಿಯದಂತೀ ಸಚರಾಚರ ವಾಸಿಯಾದ ಶ್ರೀ ವಾಸುದೇವನನು 1 ಜಗವನು ನಿರ್ಮಿಸುವ ಬೊಮ್ಮನು ಮಗನೆಂದೆನಿಸಿರುವ ಬಗೆಯುವಡೀ ಜಗವ ಜಠರದಿ ನುಸುಳಿಕೊಂಡಿರುವ ಮ್ಮೊಗನೆಂಬುವರೀಯಗಣಿತ ಮಹಿಮನ 2 ನಿಗಮವ ಪೆತ್ತವನ ಬೊಮ್ಮಗೆ ನಿಗಮವನಿತ್ತವನ ನಿಗಮೋದ್ಧಾರಕನ ನಿತ್ಯದಿ ನಿಗಮಗೋಚರನ [ಸುಗುಣ]ಶ್ರೀಪದಯುಗಳಾಂಬುಜನನು 3 ಮಾಯಾಧೀಶ್ವರನ ದೇವನಿಕಾಯಾರಾಧಿತನ ಕಾಯಜ ಸುಂದರನಾ ಜೀವನಿಕಾಯಕೆ ಮಂದಿರನಾ ದಾಯಗೆಟ್ಟರನ್ಯಾಯದಿ ಮುನಿಗಳು 4 ಪರಮಪದದೊಳಿಹನಾ ಪುನರಪಿ ತರಣಿಯೊಳಿರುತಿಹನ ಶರನಿಧಿ ಮಂದಿರನಾ ಶ್ರೀಪುಲಿಗಿರಿಯೊಳು ನಿಂದಿಹನಾ ಪೊರೆಯುವ ವರದವಿಠಲನ ನಾ5
--------------
ವೆಂಕಟವರದಾರ್ಯರು
ಎಂತುನುತಿಪೆ ನಾನು-ಈ ಜಗ | ದಂತರ್ಯಾಮಿಯನು ಪ ಸಂತತ ವಾಙÁ್ಮನ ಅ.ಪ. ಸಾಸಿರ ಮುಖದವನ-ಅವಯವ-ಸಾಸಿರವುಳ್ಳವನ ಸಾಸಿರ ಪೆಸರವನ-ರೂಪಿ ಸಾಸಿರವಾಗಿಹನ ಮೀಸಲಳಿಯದಂತೀ ಸಚರಾಚರ ವಾಸಿಯಾದ ಶ್ರೀ ವಾಸುದೇವನು1 ಜಗವನು ನಿರ್ಮಿಸುವ-ಬೊಮ್ಮನು-ಮಗನೆಂದೆನಿಸಿರುವ ಬಗೆಯುವದೀಜಗವ-ಜಠರದಿ-ನುಸುಳಿಸಿಕೊಂಡಿರುವ ಮಗುಳಿದ ನಳಿಯುವ ನಗಚಾಪರಮೊಮ್ಮಗನೆಂಬುವರೀ | ಯಗಣಿತ ಮಹಿಮನ 2 ನಿಗಮವ ಪೆತ್ತವನ-ಬೊಮ್ಮಗೆ-ನಿಗಮವನಿತ್ತವನ ನಿಗಮೋದ್ಧಾರಕನ-ನಿತ್ಯದಿ-ನಿಗಮಗೋಚರನ ಬಗೆಬಗೆಯೋಗಿಗಳ ಧ್ಯಾನಕೆನುಗಳಿದ ಶ್ರೀಪದ ಯುಗಳಾಂಬುಜನನು 3 ಮಾಯಾಧೀಶ್ವರನ-ದೇವನಿ-ಕಾಯಾರಾಧಿತನ ಕಾಯಜ ಸುಂದರನಾ-ಜೀವನಿ-ಕಾಯಕೆ ಮಂದಿರನಾ ಮಾಯಾಕಾರನಿವ ನಾಯವ ನರಿಯದೆ ದಾಯಗೆಟ್ಟರ ನ್ಯಾಯದಿ ಮುನಿಗಳು 4 ಪರಮಪದದೊಳಿಹನಾ ಪುನರಪಿ- ತರಣಿಯೊಳಿರುತಿಹನ ಶರನಿಧಿ ಮಂದಿರನಾ-ಶ್ರೀ ಪುಲಿಗಿರಿಯೊಳು ನಿಂದಿಹನ ನಿರುತವು ತನ್ನಯ ಚರಣವ ನಂಬಿದ ಶರಣರ ಪೊರೆಯುವ-ವರದ ವಿಠಲನಾ 5
--------------
ಸರಗೂರು ವೆಂಕಟವರದಾರ್ಯರು
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ ಜಲಜನಾಭನ ಕೃಪೆಯ ಪಡೆದವರು ಕೇಳಿ ಅ ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು1 ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು 2 ವೈರಿ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ3 ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು 4 ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ 5 ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ6 ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು7 ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ 8 ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು 9 ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ10 ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ11
--------------
ಕನಕದಾಸ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು