3. ಎಲ್ಲ ಆಳ್ವಾರರು
ಆಳ್ವಾರ್ ತಿರುವಡಿಗಳೆ ಶರಣೆನ್ನುತ
ಬಾಳ್ವರು ಭಜಿಪುದು ಬಕುತಿಯಲಿ ಪ
ಕೇಳ್ವರು ಕಥೆಗಳ ಮಮತೆಯಿಂದಲಿ
ಮಾಳ್ವರು ಮನೆ ವೈಕುಂಠದಲಿ ಅ.ಪ
ಮೊದಲಿನ ಮೂವರು ಮಾಧವನೆನುತ್ತ
ಪದುಮನಾಭನೊಡನಾಡಿದರು
ಅದುಭುತ ಮಹಿಮಾ ತಿರುಮೊಳಿಶಯ್ಯರ
ಮುದದಿಂ ಶಿವ ಕೊಂಡಾಡಿದನು 1
ಮಧುರಕವಿಗಳು ನಮ್ಮಾಳ್ವಾರರ
ಪದಗಳ ಪೂಜಿಸಿ ಹಾಡಿದರು
ತದುಪರಿ ತಿರುವಾಯ್ಮೊಳಿಯನು ಅವರಿಂ
ದಧಿಕರಿಸುತ ಹಿತವೆಸಗಿದರು 2
ಪೆರಿಯಾಳ್ವಾರರು ಹರಿಯನು ಪಾಡುತ
ವರವೇದಕೆ ತಾವ್ ಮೊದಲಿಗರು
ಪರಮಪಾವನೆ ಗೋದಾದೇವಿಯು
ದೊರೆ ಶ್ರೀರಂಗನ ಕೈವಿಡಿದಳ್ 3
ಪೆರಿಯ ತಿರುಮೊಳಿಯ ತಿರುಮಂಗೈಯ್ಯರು
ತಿರುಪ್ಪಾಣ ವಿಪ್ರನಾರಾಯಣ
ತಿರುವನಂತಪುರದ ಕುಲಶೇಖರರು
ಸಿರಿಯರಸನ ತೇರ ಮಾಡಿದರು 4
ಪರಮಾತ್ಮನ ಸನ್ನಿಧಿಯಿಂದಲ್ಲಿಗೆ
ತೆರಳುತ ಮಹಿಮೆಯ ತೋರಿದರು
ನಿರುತ ದೇವರೆಡೆ ಪೂಜೆಗೊಂಬರು
ವರಜಾಜೀಶನ ಸೇವಕರು 5