ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ 1 ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ 2 ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ ಬಂದಡರಿ ಕೂತುಕೊಂಡವರದೆ ತಪ್ಪೋ ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ ಕಂಡು ಇದ್ದಂತ್ಹೇಳೋ ಪಂಢರಿರಾಯ 3 ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ ಯಾವಾಗ್ಹೇಳಯ್ಯ ಭಾವಜಪಿತನೆ 4 ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ 5
--------------
ರಾಮದಾಸರು
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು