ದೇವೇಂದ್ರನ ಸೊಸೆ ದೇವಕ್ಕಿ ತನಯಳು
ಏನೇನು ಬಯಸಿದಳು ಪ
ಒಂದು ತಿಂಗಳು ತುಂಬಲು ಸುಭದ್ರ
ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು
ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ-
ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1
ಎರಡು ತಿಂಗಳು ತುಂಬಲು ಸುಭದ್ರ
ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು
ಪರಿವೇಶನ ತಂಗಿ ಹರಡಿ ಕಂಕಣ ಹಸ್ತ
ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2
ಮೂರುತಿಂಗಳು ತುಂಬಲು ಸುಭದ್ರ
ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು
ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ
ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3
ನಾಲ್ಕು ತಿಂಗಳು ತುಂಬಲು ಸುಭದ್ರ
ಆಕಳ ತುಪ್ಪ ಅನಾರಸ ಬಯಸಿದಳು
ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು
ಏಕಾವಳಿಯ ಸರ ಹಾಕೇನೆಂಬುವಳು 4
ಐದು ತಿಂಗಳು ತುಂಬಲು ಸುಭದ್ರ
ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು
ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು
ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5
ಆರು ತಿಂಗಳು ತುಂಬಲು ಸುಭದ್ರ
ಚೌರಿ ರಾಗಟೆ ಜಡೆಬಂಗಾರ ಬಯಸಿದಳು
ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು
ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6
ಏಳು ತಿಂಗಳು ತುಂಬಲು ಸುಭದ್ರ
ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು
ಕಮಲ ಕ್ಯಾದಿಗೆ ಮುಡಿಯ
ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7
ಎಂಟು ತಿಂಗಳು ತುಂಬಲು ಸುಭದ್ರ
ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು
ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು
ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8
ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ
ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು
ಮಂಗಳಮಹಿಮ ಭೀಮೇಶಕೃಷ್ಣನ ತಂಗಿ
ಕಂದ ಅಭಿಮನ್ಯು ಎಂಬುವನ ಪಡೆದಳು 9