ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ ಬಗೆಬಗೆ ಶೃಂಗಾರವಾಗಿ ಬಂದ ರಂಗನು 1 ಅಂಬರ ಜರನಿರಿಗಳಲಿ ಕುಂದಣದುಡಿದಾರವ ಕಟ್ಟಿ ಚÉಂದುಳ್ಳ ಭುಜಕೀರ್ತಿ ಕರ್ಣಕುಂಡಲನಿಟ್ಟು2 ಶಂಖ ಚಕ್ರ ಕರಗಳಲ್ಲಿ ಕಂಕಣ ಭೂಷಣಗಳಿಂದ ಕಿಂಕಿಣಿ ನೂಪುರಗಳಿಂದ ಅಲಂಕಾರವಾಗಿ 3 ಕಸ್ತೂರಿ ಕೇಸರಿಯು ಗಂಧ ಬುಕ್ಕಿ ್ಹಟ್ಟು ಪರಿಮಳದ ಚೆಂದ ಕರ್ಪೂರ ತಾಂಬೂಲ ಬಾಯಲೊಪ್ಪುವ ರಂಗ 4 ನಿತ್ಯ ಸೂರ್ಯ ಪ್ರಕಾಶ ಮಲ್ಲಿಗೆ- ಮಾಲೆ ಮುಡಿದು ಹೊರಟ ಜಗದಮೋಹನ ರಂಗ5 ಸಾಲು ಸಾಲು ಮನೆಗಳಲಿ ಮೇಲು ಮೇಲುಪ್ಪರಿಗೆನೇರಿ ಬಾಲಕೃಷ್ಣ ಬರುವ ಭರವ ನೋಡುತ್ತಿದ್ದರು 6 ವಾರಿಗೆ ಸತಿಯೇರ ತನ್ನ ವಾರೆನೋಟದಿ ನೋಡುತ ಮಾರನಯ್ಯನು ಬಂದನು ತಾ ಬಜಾರ ಮಧ್ಯದಿ 7 ಚೆಲ್ವೆಯರೆಲ್ಲರು ಅರಳುಮಲ್ಲಿಗೆ ಕರದಲ್ಲಿ ಪಿಡಿದು ಫುಲ್ಲಾಕ್ಷನ ಮ್ಯಾಲೆ ನಗುತ ಚೆಲ್ಲುತಿದ್ದರು 8 ಯಾದವರೇಶನೆ ನಿನಗೆ ಭೇದವ್ಯಾಕೆನ್ನ ಮ್ಯಾಲೆ ನೀ ದಯಮಾಡೆನ್ನ ಮನೆಗೆನುತ ರಾಧೆ ಕರೆದಳು 9 ವಜ್ರದ ಗೊಂಬೆಯಂದದಿ ವೈಯಾರಿ ಮೆಲ್ಲನೆ ಬಂದು ಪದ್ಮನಾಭ ಬಾ ನಮ್ಮನೆಗೆನುತ ಭದ್ರೆ ಕರೆದಳು 10 ಅಂತರಂಗದಲ್ಲಿ ಕೋಟಿ ಪಂಥವ್ಯಾತಕೆನ್ನಮ್ಯಾಲೆ ಸಂತೋಷದಿ ಬಾರೆನುತ ಜಾಂಬವಂತಿ ಕರೆದಳು 11 ಸತ್ಯಭಾಮೆ ರುಕ್ಮಿಣಿದೇವಿ ಮಿತ್ರೆನೀಲಾ ಜಾಂಬವಂತಿ ಲಕ್ಷಣಾ ಕಾಳಿಂದಿ ಭದ್ರೆ ಕರೆಯುತಿದ್ದರು 12 ಇಷ್ಟುಮಂದಿ ಸತಿಯರೊಳಗೆ ನಿಷ್ಠುರವಾಗುವೆನೆಂದು ಎತ್ತ ಕಡೆಗೆ ಪೋಗಲೆಂದು ಶ್ರೀಕೃಷ್ಣ ನುಡಿದನು 13 ಹರಿಯ ಮಾತುಗಳನೆ ಕೇಳಿ ಸರುವರು ಸುಮ್ಮನೆ ನಿಲ್ಲೆ ಕರದಿ ವೀಣೆಯ ಪಿಡಿದು ಬಂದನು ಭರದಿ ನಾರದ 14 ಭಂಗ ಬಂದಿತೇನೊ ನಿನಗೆ ಇಂದೆನ್ನ ಹಿಂದೆ ಬಾರೆನುತ ನಾರಂದ ಕರೆದನು 15 ಕೇಳಿ ನಾರದರ ಮಾತು ತಾಳಲಾರದೆ ರುಕ್ಷ್ಮಿಣಿಯು ದಾನ ಒಯ್ದು ದಕ್ಕಿಸಿಕೊಂಡಿರೆಂದು ನುಡಿದಳು 16 ಅಕ್ಕನ ಮಾತಿನ ಬಾಣ ನೆಟ್ಟಿತು ಎನ್ನೆದೆಗೆ ಬಂದು ಕೃಷ್ಣ ನೀ ಕೇಳೊ ಕೇಳೆಂದು ನುಡಿದಳು ಭಾಮೆ 17 ಬಿಟ್ಟು ಬಾಣವ ಮಾಡಿ ಯುದ್ಧ ದಿಟ್ಟಳೆನಿಸುವುದೆ ಸಿದ್ಧ ಪೃಥಿವಿಯೊಳಗೆ ಬಾಣನಂದಿ ಎಂದು ಪ್ರಸಿದ್ಧಿ 18 ದಾರಿಗೆ ತೆಗೆಸಿದೆ ನೀನು ಮೋರೆಗಡ್ಡ ಮಂಡಿ ಪನ್ನಿ ಹೀನ ಕಾರ್ಯವ ಮಾಡಲು ನೀ ಅರಿಯೇನೆ ರುಕ್ಮಿಣಿ 19 ಗುಣನಿಧಿ ಗೋಪಾಲ ಹರಿಗೆ ಮಡದಿ ಎನಿಸುವುದೆ ಸರಿಯೆ ಮಣಿಯ ಕಳವು ಇಟ್ಟದ್ದು ನಿಮ್ಮ ಗುಣವ ನಾನರಿಯೆ 20 ಮಾಯಕಾರ್ತಿ ಮಾತುಗಳ ಅನ್ಯಾಯವೊ ನ್ಯಾಯವೊ ನಾನು ಬಾಯಬಿಟ್ಟರೇನುಳಿದೀತೆ ನಿನ ಮಾರ್ಯಾದೆ ರುಕ್ಮಿಣಿ 21 ಸಾಕು ಸತ್ಯಭಾಮೆ ನಿನಗೆ ಯಾಕೆ ಕೋಪ ಬಂದಿತೆಂದು ನಾಲ್ಕು ತೋಳಿಂದಪ್ಪಿಕೊಂಡನು ಶ್ರೀಕಾಂತ ನಗುತ 22 ಎಲ್ಲ ಸತಿಯರನು ತಾನಿದ್ದಲ್ಲಿಗೇ ಕರೆಸಿದ ಕೃಷ್ಣ ವಲ್ಲಭೆ ರುಕ್ಮಿಣಿಯ ಚರಣಕ್ಕೆ ಎರಗಿಸಿದನಾಗ 23 ರುಕ್ಮಿಣಿದೇವೇರ ತೊಡೆಯ ವಿಚಿತ್ರದ್ಹಲಿಗೆ ಮಂಚಮಾಡಿ ನಕ್ಷತ್ರದೊಳು ಚಂದ್ರನಂತೆ ಹೊಳೆಯುತ್ತಿದ್ದನು 24 ಆರ್ಯಳು ಎನ್ನ ಪಟ್ಟದ ಭಾರ್ಯಳು ರುಕ್ಮಿಣಿಯ ಮಾತು ಮೀರಬ್ಯಾಡಿರೆಂದೆನುತ ಸಾರಿ ಹೇಳಿದ 25 ಹಚ್ಚಿದ್ಹಗಲು ಬತ್ತಿಯಂತೆ ಹದಿನಾರು ಸಾವಿರ ಮಂದಿ ಭೀಮೇಶ ಕೃಷ್ಣನ ಚರಣಕ್ಕೆರಗಿ ನಗುತ ಕುಳಿತಿರಲು 26
--------------
ಹರಪನಹಳ್ಳಿಭೀಮವ್ವ
ನೀನೆ ಸಜ್ಜನರ ಬಂಧು ಪ ಕರಿಮರಿಬಳಗ ಬಂದೊದಗಿದರೇನು ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ ಕರಿಬಂಧನ ಪರಿಹರಿಸಿದೆ ಕೃಷ್ಣ 1 ಪಿತರು ಮಾತೆಯರಿದ್ದರೇನು ಸುತರಾಪತ್ತಿಗೊದಗಲಿಲ್ಲ ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ- ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2 ವಲ್ಲಭರೈವರಿದ್ದರೇನು ವಸನ ದ್ರೌಪದಿಗುಡಿಸಲಿಲ್ಲ ಫುಲ್ಲಾಕ್ಷನೆ ಗತಿಯೆಂದರೆ ನೀ ತಡ- ವಿಲ್ಲದಲಕ್ಷಯ ನೀಡಿದೆ ದೊರೆಯೆ 3 ಮನೆಧನ ಧಾನ್ಯಗಳಿದ್ದರು ಧನಂಜಯ- ನ್ವನವಾಸಗಳನು ಬಿಡಿಸಲಿಲ್ಲ ವನಜಾಕ್ಷನೆ ವಾರಣಾವತಿ ದೊರೆತನ ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4 ಭವ ಘೋರ ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ ಶ್ರೀರಮಣನೆ ಭೀಮೇಶಕೃಷ್ಣನೆಂದು ಸಾರುವರಿಗೆ ಕರುಣಾವಾರಿಧಿ ಹರಿಯೆ 5
--------------
ಹರಪನಹಳ್ಳಿಭೀಮವ್ವ
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ 1 ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ2 ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ3 ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ4 ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ5 ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ6 ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ7
--------------
ನಿಡಗುರುಕಿ ಜೀವೂಬಾಯಿ
ತಾರಮ್ಮಯ್ಯ-ಯದುಕುಲ-ವಾರಿಧಿಚಂದ್ರಮನಪಮಾರಜನಕನ-ಮೋಹನಾಂಗನ-|ಸೇರಿ ಸುಖಿಸೆ ಹಾರೈಸಿ ಬಂದೆವು ಅ.ಪಬಿಲ್ಲು ಹಬ್ಬಗಳಂತೆ_ಅಲ್ಲಿ ಬೀದಿ ಶೃಂಗಾರವಂತೆ ||ಮಲ್ಲಕಾಳಗೆ ಮದ್ದಾನೆಗಳಂತೆ |ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ 1ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||ಒದಗಿದ ಮದಗಜತುರಗಸಾಲಿನಲಿ |ಮದನಮೋಹನ ಕೃಷ್ಣ ಮಧುರೆಗೆ ತೆರಳಿದ 2ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||ಭಕ್ತವತ್ಸಲನ ಬಹು ನಂಬಿದ್ದೆವು |ಉತ್ಸಾಹ ಭಂಗವ ಮಾಡಿದನಮ್ಮ 3ರಂಗನ ನೆರೆನಂಬಿ-ಬಂದೆವು-ಸಂಗ ಸುಖವ ಬಯಸಿ ||ಭಂಗಿಸಿ ನಮ್ಮನು ಹಾಗೆ ಪೋದನಮ್ಮ |ಮಂಗಳ ಮೂರುತಿಮದನಗೋಪಾಲನು4ಶೇಷಗಿರಿಯ ಮೇಲೆ-ಹರಿ ತಾ-ವಾಸವಾಗಿಹ ಕಾಣೆ ||ಸಾಸಿರನಾಮದ ಒಡೆಯನೆಂದೆನಿಸಿದ |ಶ್ರೀ ಪುರಂದರವಿಠಲರಾಯನ 5
--------------
ಪುರಂದರದಾಸರು