ಎನ್ನಳವೆ ಯೋಗದಭ್ಯಾಸ ಹರಿಯೇ
ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ
ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ
ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ
ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ
ಅವ್ಯಯಾನಂದ ಮಾಂಗಿರಿರಂಗ ವಿಠಲ 1
ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು
ಕರ್ಮದೊಳಗುತ್ಸಾಹವಿರಲದೇ ಸುರಿನೀರು
ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ
ನಿರ್ಮಲತೆಯೇ ಫಲವು ಇದು ಕರ್ಮಯೋಗ 2
ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು
ಭಕ್ತಜನರ ಸೇವೆಯೇ ಮೇಲೆರೆವ ನೀರು
ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ
ಮುಕ್ತಿಯೇ ಫಲಮಿದೆ ಭಕ್ತಿಯೋಗ3
ಆಸನವೇ ಬೀಜ ಪ್ರಾಣಾಯಾಮವೇ ಬೇರು
ಆಸೆಯಿಂ ಗೈವ ದಿನಚರ್ಯೆಯೇ ನೀರು
ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ
ಭಾಸಿಪಾ ಫಲಮಿದೆ ಹಟಯೋಗವಯ್ಯ 4
ಯಮನಿಯಮಗಳೆ ಬೀಜಧಾರಣವೆ ತಾಂಬೇರು
ಕ್ರಮಮಾದಘ್ರಣಿದಾನ ಮೇಲೆರೆವ ನೀರು
ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ
ಕ್ರಮಸಮಾಧಿಯೆ ಫಲವು ಇದು ರಾಜಯೋಗ 5
ವರವಿವೇಕ ಬೀಜ ವೈರಾಗ್ಯವೇ ಬೇರು
ಗುರುಕರುಣಮೆಂಬುದೇ ಮೇಲೆರೆವ ನೀರು
ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ
ವರಮೊಕ್ಷವೇ ಫಲವು ಇದು ಜ್ಞಾನಯೋಗ 6
ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ
ತ್ಯಾಗ ಮಾಡುವ ನಿಯಮವೆನಗಸಾದ್ಯ
ಆಗಾಗ ನಿನ್ನ ನಾಮಂಗಳನು ಪೇಳ್ವುದೇ
ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7