ಪೂಜಿಸುವೆನು ದೇವಿಯ ಶ್ರೀನಿತ್ಯ ಗೌರಿಯ ಪ
ಪರಶಕ್ತಿರೂಪೆಯ ಪರತತ್ವಮೂರ್ತಿಯ
ಪರಮಮಂಗಳ ದೇವಿಯ ಪರಮಾನುರಾಗದಿ 1
ಮೃಗಧರಮೌಳಿಯ ಜಗದುದ್ಧಾರಾಂಬೆಯ
ಮಿಗೆ ಮನದಲಿ ಧ್ಯಾನಿಸಿ ಅವಾಹಿಸುತ್ತಲಿ 2
ಸರ್ವಲೋಕೇಶ್ವರಿಯ ಸರ್ವಾಲಂಕಾರೆಯ
ಸರ್ವಾಂಗ ಸುಂದರಿಯ ಆಸನವನಿತ್ತು 3
ವಿದ್ಯಾಧಿದೇವಿಯ ಶುದ್ಧಚಿದ್ರೂಪೆಯ
ಪಾದ್ಯಾಘ್ರ್ಯಾಚ ಮನದಿಂದ ಪರಿಶುದ್ಧ ಹೃದಯದಿ 4
ಪಂಚಮವಾಣಿಯ ಚಂಚರಿಕಾಂಬೆಯ
ಪಂಚಾಮೃತವ ಜಲವ ಮುದದಿಂದ ತಳಿಯುತ 5
ಸುಂದರ ಹಾಸೆಯ ಸೌಂದರ್ಯ ಶರದಿಯ
ಚಂದ್ರಗಾವಿಯ ನುಡಿಸಿ ಕಂಚುಕವ ಗೊಡಿಸಿ 6
ಚಂದ್ರ ಬಿಂಬಾಸ್ಯೆಯ ಸಿಂಧುರ ಗಮನೆಯ
ಇಂದು ತಿಲಕವ ತಿದ್ದುತ ಗಂಧವನೆ ತೊಡೆದು 7
ಮಂಗಳ ಮಾತೆಯ ಮಂಗಳ ಮೂರ್ತಿಯ
ಮಂಗಳ ದ್ರವ್ಯದಿಂದ ಶೃಂಗಾರ ವೆಸಗಿ8
ಲೀಲಾವಿನೋದೆಯ ಬಾಲ ಕುಚಾಂಬೆಯ
ಮಾಲೆಯ ನರ್ಪಿಸುತ ಕುಸುಮಗಳ ನಿಚಯದಿ 9
ಪಾಪನಿಹಂಶ್ರಿಯ ಶ್ರೀಪತಿ ಸೋದರಿಯ
ಧೂಪ ದೀಪವ ಕಲ್ಪಿಸಿ ಅಚಮನವಿತ್ತು 10
ಸತ್ಯಸಂಕಲ್ಪೆಯ ನಿತ್ಯಸಂತುಷ್ಟೆಯ
ಉತ್ತಮ ಫಲಭಕ್ಷ್ಯದಿಂ ನೈವೇದ್ಯ ವೆಸಗಿ 11
ಕಂಬುಸುಕಂಠಿಯ ಬಿಂಬಫಲಾಧರೆಯ
ತಾಂಬೂಲ ದಕ್ಷಿಣೆಯಂ ಭಕ್ತಿಯೊಳಗರ್ಪಿಸಿ 12
ಮಂಗಳ ಮೂರ್ತಿಯ ಮಂಗಳ ಗೌರಿಯ
ಮಂಗಳಾರತಿಯ ಗೈದು ಆಚಮನವಿತ್ತು 13
ಕಲಕೀರವಾಣಿಯ ಕಲಹಂಸಗಮನೆಯ
ಲಲನಾಶಿರೋಮಣಿಯ ಬಲವಂದುನಮಿಸಿ 14
ಜಯ ಜಯ ಗೌರಿಯೆ ಜಯ ಜಯ ಮಾತೆಯೆ
ಜಯದೇವಿ ಕರುಣಿಸು ನೀಂ ವರ ಸುಪ್ರಸಾದವ 15
ಮಾನಿನಿ ದೇವಿಯು ಮೌನಿ ಸುವಂದ್ಯೆಯು
ಧೇನುಪುರೀಶ್ವರಿಯು ಸುಪ್ರೀತೆಯಾಗಲಿ 16