ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ
ಶೇಷರಾಯನ ಮುಕುಂದ ಶರಣರಾನಂದ ಪ
ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ
ಓಲಗ ಛತ್ರ ಚಾಮರ ದಿಮಿಗೆ ಅ.ಪ
ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು
ಮುತ್ತಿನಂಥಾ ತನುವು ಧೂಳಾಗಿರುವುದೋ
ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು
ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1
ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ
ಕೊರಳಿನೊಳುಹಾಕಿ ತುಳಸೀಮಾಲೆಯ
ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ
ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2
ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ
ಮಂಗಳದ ದೀಪವೂ ಮಂತ್ರಪುಷ್ಪ
ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ
ಸಂಗೀತ ನರ್ತನವು ಸ್ತುತಿಸೇವೆಯೂ 3
ವಸುಮತೀಪಾಲನೆಯ ಸತತ ನೀಗೈಯುತ್ತ
ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ
ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು
ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4
ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ
ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ
ಸಾದರದಿ ಕರ್ಪೂರ ತಾಂಬೂಲವನು ಸದಿಯೋ
ಮೋದದಿಂದಾರತಿಯ ಬೆಳಗುವೆನೋ ರಂಗಾ 5
ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ
ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ
ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ
ಜಯತು ಕರುಣಾಸಿಂಧು ಜಯಭಕ್ತ ಬಂಧು 6