ಒದಗಿ ಬಂದಿತು ಯೋಗ ಒದಗಿ ಬಂದಿತು ಯೋಗ ಪ
ಪದುಮೆಯರಸನು ರಥದೊಳಿರುವ ದರುಶನ ಭಾಗ್ಯ ಅ.ಪ
ಭುಜಗಶಯನನು ದಿವ್ಯ ರಜತ ರಥದಲಿ ಬರಲು
ಸುಜನರೆಲ್ಲರು ಸೇರಿ ಭಜನೆ ಮಾಡುವ ಭಾಗ್ಯ 1
ಅಂಗನಾಮಣಿಯರೆ ರಂಗವಲ್ಲಿಯೆ ಎತ್ತಿ
ಮಂಗಳಾಂಗನು ದೀರ್ಘ ಮಾಂಗಲ್ಯವನೆ ಕೊಡುವ 2
ಬಾಲಕರ ಸಡಗರ ಬಾಲೆಯರ ವೈಯ್ಯಾರ
ಬಾಲ ವೃದ್ಧರು ಸ್ವಾಮಿಯೋಲಗದಿ ಸಹಕಾರ 3
ಜಯಘೋಷಗಳ ಮಾಡೆ ಭಯಗಳನು ಬಿಡಿರಿ ಮನ
ಬಯಕೆಗಳ ಆನಂದಮಯನು ನೀಡುವ ನಗುತ 4
ತನ್ನಿ ಫಲಕುಸುಮಗಳ ಧನ್ಯರಾಗಿರಿ
ಕಣ್ಣಾರ ನೋಡಿ ಪ್ರಸನ್ನ ಶ್ರೀ ನಿಲಯನನು 5