ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ
ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ-
ಮ್ಮಚ್ಚುತನಾನಂತನ ನೆನವುತ ಅನುಗಾಲ
ಸ್ವಚ್ಛನಾಗಲು ಹರಿ ಮೆಚ್ಚುವನು ಪ.
ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ
ಪಾತಕ ಫಲಕಿನ್ನು ಗುರಿಯಾದಿಯಲ್ಲದೆ
ಯಾತರ ಸುಖವೆಂದೀ ಸಂಸಾರ ಕೂಪದಿ
ಪ್ರೀತಿ ಬಡುವಿ ಪಂಚಬಂಧದಲಿ
ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ
ಘಾತವಾಗುವುದೊಂದು ನಿಮಿಷಾರ್ಧದಲಿ ಜಗ-
ನ್ನಾಥ ನಂಬಿದರೆಂದಿಗು ಪದಪಂಕ-
ಜಾತಪತ್ರದ ನೆರಳಿರಿಸುವನು 1
ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ-
ನ್ನಾಹವಾಗಿರುವದನೇನೆಂದು ಗ್ರಹಿಸುವಿ
ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ
ಮೋಹವಲ್ಲದೆ ನಿಶ್ಚಯವಲ್ಲವು
ಐಹಿಕಾಮುಷ್ಮಿಕವೆಂಬ ಸಕಲ ಸುಖ
ದೋಹನ ಧೇನು ಸರ್ವೇಶ್ವರ ಹರಿಯ ಸ-
ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ
ವಾಹ ಕೈ ಬಿಡದೆ ಕಾಪಾಡುವನು 2
ಒಂದು ದಿವಸ ನೀರೊಳದ್ದದಿದ್ದರೆ ದು-
ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು
ಹಿಂದಿನ ಕರ್ಮಾನುಬಂಧವು ತಿಳಿಯದು
ಮುಂದಿನ ಹೊಂದಿಕೆ ಒಂದಾದರು
ಇಂದಿರಾವರ ವೆಂಕಟೇಶನ ಪಾದಾರ-
ವಿಂದ ಧ್ಯಾನಗಳೆಂಬದೊಂದೆ ಪರಮಸುಖ
ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ
ತಂದೆ ಬಿಡದೆ ಕಾವನೆಂದೆಂದಿಗು 3