*
ಚಿರಂಜೀವಿಯಾಗು ಗುರುವರ ಕುಮಾರಿ
ಪರಮಪ್ರಿಯ ಶ್ರೀ ಗುರುಪದಧೂಳಿ ಕರುಣದಲಿ ಪ.
ಶುಕ್ಲಪಕ್ಷದ ಚಂದ್ರನಂತೆ ಆಭಿವೃದ್ಧಿಸುತ
ಅಕ್ಲೇಶಳಾಗಿ ಅನುಗಾಲದಲ್ಲಿ
ಚಿಕ್ಕತನದಿಂದ ಗುರು ಬೋಧಾಮೃತವ ಸವಿದು
ಅಕ್ಕರೆಯಿಂದ ಪಿತ ಮಾತೆ ಪೋಷಿತಳಾಗಿ 1
ಭೂ ಕಲ್ಪತರುವೆನಿಪ ಗುರುಗಳಿತ್ತಂಕಿತವ
ನಿತ್ಯ ಪಠಣಗೈದು
ಏಕಾಂತ ಭಕ್ತಿಯಿಂ ಇಂದಿರೇಶನ ಸ್ತುತಿಸಿ
ಶ್ರೀಕಾಂತ ಹರಿಯ ಮಂಗಳ ಕೃಪೆಯ ಪಡೆಯುತಲಿ 2
ಪುಟ್ಟಿದಾ ಗೃಹಕೆ ಚಿಂತಾಮಣಿಯು ಎಂದೆನಿಸು
ಪತಿ ಗೃಹಕೆ ಗೃಹಲಕ್ಷ್ಮಿ ಎಂದೆನಿಸು
ಅಷ್ಟು ಬಂಧು ಜನಕೆ ಅಮೃತವಾಣಿಯು ಎನಿಸು
ಕೃಷ್ಣ ಭಕ್ತರನು ಪೂಜಿಸುತಲಿರು ಸತತ 3
ಇಂದು ಗುರುಕೃಪೆಗೈದ ಆಶೀರ್ವಾದದುಡುಗೆಯನು
ಚಂದದಿಂ ಧರಿಸಿ ಮಂಗಳಕರಳು ಎನಿಸಿ
ಒಂದು ಕ್ಷಣ ಬಿಡದೆ ಫಣಿರಾಜಶಯನನ ಸ್ಮರಣೆ
ಮುಂದೆ ಸತ್ಪುತ್ರ ಪೌತ್ರರ ಪಡೆದು ಸುಖದಿ 4
ನಾಗಶಯನನ ಭಕ್ತನಾದ ಪತಿಯನೆ ಸೇರಿ
ಭೋಗಿಸುತ ಇಹಪರದ ಸುಖಭಾಗ್ಯವ
ಭಾಗವತಪ್ರಿಯ ಗೋಪಾಲಕೃಷ್ಣವಿಠ್ಠಲನ
ಬಾಗಿ ನಮಿಸುತ ಸುಮಂಗಳೆಯಾಗಿ ನಿತ್ಯದಲಿ 5