ತುಂಬಿ ಬಂದಾಗ)
ನಂಬಿದೆನೊ ಸ್ವಾಮಿ ನಂಬಿದೆನೊ ಪ.
ಅಂಬುಜಾಕ್ಷ ಸ್ವಪ್ನದಿ ನೀ ತುಂಬಿದಾನಂದ ವಾರ್ತೆಯ ಅ.ಪ.
ಈರೇಳು ಲೋಕದ ಜನಕೆ
ಮೂರಾವಸ್ಥೆಗಳಲಿ ನೀನೆ
ಪ್ರೇರೇಪಿಸುವನೆಂದು ವೇದ ಸಾರವಾಗಿದೆ
ನಾರದಾದಿ ಸಕಲ ಮುನಿ
ವೀರರೆಲ್ಲ ಸ್ವಪ್ನವು ನಿ-
ಸ್ಸಾರವಲ್ಲವೆಂದು ಪೇಳ್ವಾಧಾರದಿಂದ ಭ್ರಮೆಯ ಬಿಟ್ಟು 1
ನಾನು ನನ್ನದೆಂಬ ಬಹು
ಹೀನ ಮತಿಯ ಪೇಳ್ವ ನರಗೆ
ತಾನಾಗಿ ಬಂದುಸುರಲನುಮಾನಕರವೆಂದು
ಶ್ರೀನಿಕೇತನ ನಿನ್ನ ಚರಣ
ಮಾನಿಯೆಂದು ಮನ್ನಿಸಿ
ಸ್ವಪ್ನಾನುಸರಿಸಿ ಶುಭವ ಪೇಳಿ ದೀನಭಾವ ಕಳೆವಿಯೆಂದು 2
ಇಂದಿರೇಶ ಎನ್ನೊಳಿರುವ
ಕುಂದನೊಂದನೆಣಿಸದೆ ಈ
ಅಂದದಿಂದಲೆಂದೆಂದಿಗು ತಂದೆ ಕರುಣಿಸು
ಸುಂದರಾಂಗ ಶೇಷಗಿರಿ
ಮಂದಿರ ನಿನ್ನ ಪಾದಾರ
ವಿಂದ ಭಕ್ತಿ ಇತ್ತು ನಿತ್ಯಾನಂದಗೊಳಿಸಿ ಸಲಹೊ ಬೇಗ 3