ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ
ಸ್ವೀಕರಿಸಬೇಕು ಕ್ಷಣದಿ ಪ
ನಾಕಾರು ವಿಧಗಳಲಿ ನೀಪೇಳಿದುದನೆಲ್ಲ
ಏಕಮನದಲಿ ಮಾಡಿದೆ ಕೃಷ್ಣ ಅ.ಪ
ಬಾಲತನದಲಿ ಬಹಳ ಲೋಲನಾಗಿರು ಎಂದು
ಪೇಳಲಿಲ್ಲವೆ ಯೋಚಿಸು
ಕೀಳುಜೀವನದಲ್ಲಿ ಕಾಲವನು ಕಳೆ ಎಂದು
ಪೇಳಿದುದ ನೀ ಮರೆತೆಯಾ
ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ
ಪೇಳಿದುದ ಮಾಡಿರುವೆನೊ 1
ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ
ಪಾಪ ಪುಣ್ಯಕೆ ಕಾರಣ
ಈ ಪರಿಯ ನಿನ್ನ ಸಂಕಲ್ಪವನು ಮೀರಲು
ತಾಪಸೋತ್ತಮರಿಗಳವೆ
ಆಪತ್ತು ಸಂಪತ್ತು ನಿನ್ನಧೀನಗಳೆಂದು
ತಾಪತ್ರಯವ ಸಹಿಸಿದೆ 2
ಇಂದಿರಾಪತಿ ನಿನ್ನ ಒಂದೊಂದು ದಿನದಲಾ
ನಂದ ಪೂಜೆಗೈಯಲು
ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ
ಇಂದು ಮಾಡುವರ್ಯಾರು
ಸಂದೇಹವಿಲ್ಲವೆನಗೆ 3
ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ
ಸಂತಸದಿ ಮುಳುಗಿರುವೆನೊ
ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ
ಶಾಂತಿಯನು ದಯಮಾಡೆಲೊ
ಸಂತತ ನೀನು ಎನ್ನಂತರಂಗದಲಿರಲು
ಕಂತೆಯಂದದಿ ಕಾಂಬೆನೊ ಜಗವ 4
ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು
ಯಾರ ಭಯವೆನಗಿಲ್ಲವೊ
ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು
ಮೀರಿ ನಡೆಯುವುದಿಲ್ಲವೊ
ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ
ಯಾರಿರುವರೊ ಜಗದಲಿ ನಿನ್ಹೊರತು 5