ಧನಪ್ರದ ಶ್ರೀಕರ ಕಾರುಣ್ಯ ಸ್ತೋತ್ರ
ಧನಕೀರ್ತಿಗಳ ಹುಡುಕಿ ತಿರುಗಾಡಲಾರೆ
ಧನಕೀರ್ತಿಗಳ ಕೊಡುವಿ ನೀನಾಗಿ ನೀನೆ ಪ
ಶ್ರೀಕರನೇ ನೀನಾಗಿ ನೀನೇ ಸುಧಾಮನಿಗೆ
ಬೇಕಾದ ಸೌಭಾಗ್ಯ ಧನ ಧಾನ್ಯವಿತ್ತಿ
ಸಾಕಿ ಸಲಹುವ ಸ್ವಾಮಿ ನೀನಿರಲಿಕೆ ನಾನು
ಏಕೆ ತಿರುಗಾಡುವುದು ಕುಳಿತಲೆ ಕೊಡುವಿ 1
ಪತಿ ಹೃಸ್ಥ ಶ್ರೀ ರಮಾಪತಿ ಸರ್ವ
ಪ್ರೇರಕಾಂತರ್ಯಾಮಿ ಆರ್ತಿಹರ ನೀನು
ವರಜ್ಞಾನ ಯೋಗಿವರ್ಯನು ರೈಕ್ವ ಕುಳಿತಲೆ
ಪೌತ್ರಾಯಣ ದ್ವಾರ ಭಾರಿ ಧನವಿತ್ತೆ 2
ದೇವ ವೃಂದದಿ ಪ್ರವರ ಗುರು ವಾಯು ಪ್ರೇರಿಸಲು
ದೇವ ಶರ್ಮನು ಬಂದು ಏನೂ ಬೇಡದಲೆ
ನಿವ್ರ್ಯಾಜ ಭಕ್ತಿ ಆನಂದದಲಿ ಸ್ತುತಿಸಿದನು
ದ್ರವಿಣಾದಿ ಧನವಿತ್ತಿ ನೀನಾಗಿ ನೀನೇ 3
ಸರ್ವದೊಳು ನೀನಿರುವಿ ಸರ್ವವಶಿ ನಿಸ್ಸಂಗ
ಸರ್ವಧಾರಕ ಶ್ರೀಶ ಸರ್ವಗುಣ ಪೂರ್ಣ
ಭೂಮಿಯಲಿ ಮಾರ್ಜಾಲ ತನ್ನ ಮರಿಯ ತಾನೇ ಎತ್ತಿ
ಕಾಯುವಂತೆ ನೀ ಎನ್ನ ಸರ್ವದಾ ಕಾಯುತಿ ಕೃಪೆಯಿಂದ 4
ಶಂಖ ನಿಧಿ ಪದ್ಮನಿಧಿ ರವಿ ಸೋಮಕೈಗಳಲಿ
ಶಂಖಾರಿಧರ ದ್ರವ್ಯ ಕೊಡುವ ಹಸ್ತಗಳು
ಸ್ವಾಂಕಸ್ಥ ಲಕ್ಷ್ಮೀ ಸಮೇತ ಗರುಡಾ ರೂಢ
ಶ್ರೀಕರನೇ ಅಜಪಿತ ನಮೋ ಪ್ರಸನ್ನ ಶ್ರೀನಿವಾಸ 5