ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ
ಸುಧೆಯಾನಂದ ಉಣಿಸಿದ ಪ.
ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ
ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ
ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ
ಮಾಧವ 1
ದಾರು ನೀನಲ್ಲದೆ ಮಾರಮಣನೆ ನಿನ್ನ
ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ
ಮೂರು ದೊರೆಗಳಲಿ ವಾರಿಜನಾಭ ನೀ
ಪ್ರೇರಕನಾಗಿರೆ ಘೋರವಾವರಿಸುವುದೆ 2
ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ
ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ
ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ-
ಕಲ್ಪ ಭಜಕ ನಿಜ ಕಲ್ಪತರುವೆನಿಪ 3