ಕರುಣವೇಕೆ ಬಾರದಯ್ಯಾ ಕರಿವರದನೆ ಪ
ಶರಣ ರಕ್ಷಕನೆಂದು ನಿನ್ನ ಮೊರೆಯ ಹೊಕ್ಕೆನೊ ಸರಸಿಜಾಕ್ಷ
ಮರಣ ಕಾಲದಿ ಮಗನ ಕರೆದ ಪುರುಷ ಪುಣ್ಯ ಶರಧಿಯೇನೊ ಅ.ಪ.
ತುತಿಸಸಲಿಲ್ಲವೆಂದು ಎನ್ನ ಹಿತವಗೈಯದೆ ಜರಿಪರೇನೊ
ತುತಿಸಲಾಪವೇ ಶ್ರುತಿಗಳನ್ನು ಮಿತಿಗೆ ಸಿಲ್ಕದ ನಿನ್ನ ಮಹಿಮೆ 1
ಏನು ಸಾಧನವವÀ ಮಾಡಲಿಲ್ಲವೆಂದು ಕೈಬಿಡುವೆಯೇನೊ
ನೀನು ದಯಮಾಡಿದಲ್ಲದೆ ಏನು ಸಾಧನ ಮಾಡಲಾಪೆನೊ 2
ಪಾಪಪುಣ್ಯ ಕರ್ಮಗಳಿಗೆ ನೀನೆ ಪ್ರೇರಕನಲ್ಲವೇನೊ
ಶ್ರೀ ಪರಾತ್ಪರ ನೀ ಸ್ವತಂತ್ರ ನಾ ಪರಾಧೀನನಲ್ಲವೆ 3
ಪುಣ್ಯಗೈದವರಲಿ ಕರುಣವನು ಗೈವುದೇನು ಮಹಿಮೆ
ಘನ್ನ ಪಾಪಿಗಳಲಿ ನೀ ಪ್ರಸನ್ನನಾಗಲು ಖ್ಯಾತಿಯಲ್ಲವೆ 4
ಪತಿತಪಾವನ ದೀನರಕ್ಷಕ ಶ್ರಿತ ಜನಮಂದಾರನೆಂಬ
ವಿತತ ಬಿರುದು ಬರಿದೆ ಪೇಳೋ ಗತಿ ಪ್ರದಾಯಕನಲ್ಲವೇನೊ 5
ದುರಿತ ರಾಶಿ ನೋಡಿ ಬೆದರಿ ನಿಂತೆಯೇನೊ ನೀನು
ದುರಿತ ದೂರನಲ್ಲವೇ ನಿನ್ನ ಸ್ಮರಣೆ ನೋಡದ ದುರಿತವಿಹುದಿ 6
ತರಳತನದ ಸಲಿಗೆಯಿಂದ ಪರಿಪರಿಯಲ್ಲಿ ನುಡಿದೆನಯ್ಯಾ
ಪರಮ ತತ್ವವರಿಯೆ ನಾನು ಪೊರೆಯೊ ಎನ್ನ ಕರಿಗೀರೀಶ 7