ಸಕಲ ಕರ್ಮಗಳ ಮಾಡಿ ಮಾಡಿಸುವೆ ನೀನು ಪ
ವಿಕಳಮತಿಗಳಿದನರಿಯರೇನೆಂಬೆ ನಾನು ಅ.ಪ.
'ತೇನವಿನಾ ತೃಣಮಪಿ ನ ಚಲತಿ' ಎಂಬುದನು
ಆನುಪೂರ್ವಕದಿಂದ ತಿಳಿದು ತಿಳಿಯದಂತೆ
ತಾನು ಪುಣ್ಯಕರ್ಮಗಳನು ಮಾಳ್ಪವನೆಂದು
ನೀನು ಪಾಪಕೆಳಸುವೆನೆಂಬರಧಮ ಜನರು 1
ವಿಧಿವಿಹಿತ ಕರ್ಮಗಳನು ಮಾಡಿಸುವಾತ ಹರಿಯು
ಆಧುನಿಕ ಕರ್ಮಗಳಿಗೆ ಕರ್ತೃ ತಾನೆ ಎಂದು
ಅಧಮ ಕಾರ್ಯಗಳ ಮಧುವೈರಿಗಾರೋಪಿಸದೆ
ನಿಧನರಾಗಿಹ ಜನರು ಮಧ್ಯಮರೆನಿಸುವರು 2
ಪಾಪ ಪುಣ್ಯ ಕರ್ಮಗಳೇನು ಮಾಡುವುದಕೆ
ಶ್ರೀಪತಿ ರಂಗೇಶವಿಠಲ ಪ್ರೇರಕನಲ್ಲದೆ
ವ್ಯಾಪಾರ ತನಗಿನಿತಾದರಿಲ್ಲವೆಂದರಿತು
ಲೇಪರಹಿತರಾಗಿಹರೆ ಉತ್ತಮರಯ್ಯಾ 3