ಶ್ರೀಲೋಲನಲ್ಲೆ ಭಾಮೆ ಅವಲೋಲನಲ್ಲೆ ಭಾಮೆ ಪ
ಲೋಲನೊ ಬಾಲನೊ ಗೋಪಾಲನೊ ನಾನರಿಯೆ ಅ.ಪ.
ಇಂದು ತಮನ ಕೊಂದು ವೇದವ ತಂದವನಲ್ಲೆ ಭಾಮೆ
ಅವತಂದವನಲ್ಲೆ ಭಾಮೆ
ತಂದವನೊ ಬಂದವನೊ ಅದರಂದವನು ನಾನರಿಯೆ 1
ಅರ್ಥಿಯಿಂದಲಿ ಗಿರಿಯ ಬೆನ್ನಿಲಿ ಪೊತ್ತವನಲ್ಲೆ ಭಾಮೆ
ಅವ ಪೊತ್ತನಲ್ಲೆ ಭಾಮೆ
ಪೊತ್ತವನೊ ತೆತ್ತವನೊ ಅದರರ್ಥವನು ನಾನರಿಯೆ 2
ವರಾಹ ಸ್ವಾಮಿಯಲ್ಲೆ ಭಾಮೆ
ಅವ ಸ್ವಾಮಿಯಲ್ಲೆ ಭಾಮೆ
ಸ್ವಾಮಿಯೊ ಪ್ರೇಮಿಯೊ ಬಹು ಕಾಮಿಯೊ ನಾನರಿಯೆ3
ತರಳ ಪ್ರಹ್ಲಾದನಿಗೊಲಿದ ನರಹರಿಯಲ್ಲೆ ಭಾಮೆ
ಅವ ನರಹರಿಯಲ್ಲೆ ಭಾಮೆ
ನರಹರಿಯೊ ಸಿರಿದೊರೆಯೊ ಆ ಉರವಣಿಗೆಯ ನಾನರಿಯೆ4
ನೆಲನ ಈರಡಿ ಮಾಡಿ ಅಳೆದ ಚೆಲುವನಲ್ಲೆ ಭಾಮೆ
ಅವ ಚೆಲುವನಲ್ಲೆ ಭಾಮೆ
ಚೆಲುವನೊ ಮಲೆವನೊ ಅಂಡಲೆವನೊ ನಾನರಿಯೆ 5
ಕೊಡಲಿ ಮಸೆದು ರಾಯರನೆಲ್ಲ ಕೆಡಹಿದನಲ್ಲೆ ಭಾಮೆ
ಅವ ಕೆಡಹಿದನಲ್ಲೆ ಭಾಮೆ
ಕೆಡಹಿದನೊ ಮಡುಹಿದನೊ ಆ ತೊಡರವನು ನಾನರಿಯೆ 6
ಸೀತಾ ಚೋರನ ಕೊಂದ ರಘುನಾಥನಲ್ಲೆ ಭಾಮೆ
ಅವ ನಾಥನಲ್ಲೆ ಭಾಮೆ
ನಾಥನೊ ಖ್ಯಾತನೊ ಆ ಮಾತನು ನಾನರಿಯೇ 7
ಮಾವನ ಕೊಲಲು ಮಧುರೆಗೆ ಪೋದ ದೇವನಲ್ಲೆ ಭಾಮೆ
ಅವ ದೇವನಲ್ಲೆ ಭಾಮೆ
ದೇವನೊ ಭಾವನೋ ಗೋ ಕಾವನೊ ನಾನರಿಯೆ8
ತ್ರಿಪುರಾಂಗನೆಯರ ವ್ರತವನಳಿದ ಚಪಳನಲ್ಲೆ ಭಾಮೆ
ಅವ ಚಪಳನಲ್ಲೆ ಭಾಮೆ
ಚಪಳನೊ ವಿಪುಳನೊ ಆ ವಿಪರೀತವ ನಾನರಿಯೆ 9
ಓಜೆಯಿಂದ ತೇಜಿಯನೇರಿದ ರಾಜನಲ್ಲೆ ಭಾಮೆ
ಅವ ರಾಜನಲ್ಲೆ ಭಾಮೆ
ರಾಜನೊ ಭೋಜನೊ ಆ ಸೋಜಿಗವ ನಾನರಿಯೆ 10
ಸೃಷ್ಟಿಗೆ ಕರ್ತನು ವಿಜಯವಿಠ್ಠಲನಲ್ಲೆ ಭಾಮೆ
ಅವ ವಿಠ್ಠಲನಲ್ಲೆ ಭಾಮೆ
ವಿಠ್ಠಲನಾದರೆ ಇಷ್ಟೊಂದ್ಯಾತಕೆ ದಟ್ಟಡಿಗಳಿಗೊಂದಿಸುವೆ 11