ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಪ
ಅಂದದಿಂದ ಪುರಂದರದಾಸರಿ |
ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಅ.ಪ
ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ
ಜಪಮಂತ್ರ ಹರಿಪೂಜೆಯನೆ ಮಾಡಿ ||
ಧಳಥಳಿಸುವ ವಿಠಲನ ದಿವ್ಯ ಪಾದ
ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ 1
ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ |
ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ ||
ಥಟ್ಟನೆ ವೇದಕ್ಕೆ ಸಮನಾದ ಪದಗಳು |
ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು2
ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ |
ಬಿಡದೆ ದಾಸರ ದಾರಿಯ ನೋಡಿ ||
ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ |
ಕಡೆಯದೆಶೆ ಧರಿಸಿದರು ದಾಸರಾ 3
ಹಗಲು ಒಂಭತ್ತು ತಾಸಾಗಿರಲು |
ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು ||
ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ |
ಜಗದೊಳು ನಾನಪರಾಧಿಯೆಂದರೂ 4
ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ |
ರಾಜಿಸುತ್ತ ಬಂದು ಕುಳಿತಿರಲಂದೂ ||
ಆ ಜನದೊಡಗೀ ದಾಸರು ಕರೆಯಲು |
ನೈಜಭಾವದಿಂದು ಬಂದು ಕುಳಿತರೂ 5
ಪದಗಳು ಬರದ ವಹಿಯಕೊಂಡು ಪೋಗಿ |
ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ ||
ಅದನರಿಯದೆ ದಿಂಡೆಯನೊಬ್ಬನು ಆ |
ಪದವಹಿಯ ತೆಗೆದು ಬಿಸುಟನಾಗಾ 6
ಯೆರಡಾವರ್ತಿ ತೆಗೆಯಲು ಆಗ |
ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ ||
ಗುರು ವ್ಯಾಸರಾಯರು ನೋಡಿ ಹರುಷದಿಂದ |
ಕರೆದು ಬೈದರವಗೆ ಕಡು ಮೂರ್ಖನೆಂದೂ 7
ಪದದೊಹಿ ತೆಗೆದು ಬಿಸಾಡಿದರೆ ತಿರುತಿರು
ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು ||
ನರರುತ್ತಮರೆಲ್ಲ ನೋಡಿ ಹರುಷದಿಂದ |
ಪುರಂದರ ಉಪನಿಷತ್ತೆಂದರೂ 8
ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು |
ಅರಿವೆಯ ಕೈಯಿಂದೊರಸಲು ಆಗ ||
ತ್ವರಿತದಿ ಕೇಳಲು ವಿಠಲನ ಗುಡಿಯೊಳು |
ಪಡದಗುರಿ ಹತ್ತವು ವರಿಸಿದೆವೆಂದರು 9
ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ |
ಹೋಗಿ ನೋಡಿ ಬಾರೆಂದೆನಲಾಗಿ ||
ಬೇಗದಿಂದಲಿ ಬಂದು ಕೇಳಲು ಅವರು |
ಈಗ ದಾಸರು ಬಂದು ಪರಿಹರಿಸಿದರೆಂದು 10
ಆ ಮಾತು ಕೇಳಿದಾಕ್ಷಣದಿ ಬೇಗ |
ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ ||
ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು |
ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ 11
ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ |
ಅಂತರಂಗದಲಿ ಅತಿಮಾನವ ಮಾಡಿ ||
ಮೂರ್ತಿ |
ಶಾಂತತ್ವದಿ ನೋಡುತ ಶರಣು ಮಾಡಿದರೂ 12
ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ |
ಭಜನೆಯಿಂದ ದಿನ ದಿನ ಪೊಗಳಿ ||
ತ್ರಿಜಗದೊಡೆಯ ಗುರು ಪುರಂದರವಿಠಲನ |
ನಿಜ ವೈಕುಂಠದ ಮುಕ್ತಿಯೈದಿದರೂ 13