ಅಮೃತ ನೀಡೆನಗೆ ಪ
ಅಮೃತ ನೀಡಪಮೃತ್ಯುಕಳೆದು ಧ್ಯಾ
ನಾಮೃತವೆಂಬ ಸಾಮ್ರಾಜ್ಯ ಸಂಪದವಿತ್ತು ಅ.ಪ
ಜರಾ ಮರಣವ ಗೆಲಿಪ ಅಮೃತ
ದುರಿತ ಪರ್ವತಲೋಪ
ಭರದಿಗೈದು ಮಾಯಮರವೆ ಹರಿಗೆ
ಸ್ಥಿರ ಪರಮಪಾವನ ಮಾಳ್ಪ ಹರಿಸ್ಮರಣಾನಂದ 1
ಭವಬಾಧೆಯ ಗೆಲಿಪ ಅಮೃತ
ಜವನ ಭಯವ ಲೋಪ
ಜವದಿಗೈದು ತ್ರಯ ಭುವನದೊಳ್ಮಿಗಿಲಾಗಿ
ಧ್ರುವನು ನಿರುತಮಾಗಿ ಸವಿದ ಮಹದಾನಂದ2
ತಾಮಸಗಳನಳಿವ ಅಮೃತ
ಪಾಮರತನ ತುಳಿವ
ಆ ಮಹ ವೈಕುಂಠದ ವಿಮಲ ಪದವಿಯನು
ಕ್ಷೇಮದೀಯುವ ಶ್ರೀರಾಮ ಪ್ರೇಮಾನಂದ 3