ಶ್ರೀಮಾಧವ ಪಾದವ ಸಂತತ ಮನದಿ
ನೇಮದಿ ಧ್ಯಾನಿಸು ನೀ ಪ
ಪ್ರೇಮಮೂರ್ತಿಯನೆನೆವರಾರಾದರೇನಯ್ಯ
ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ
ಮದಗಜವನುಸರದಿ ಮೊಸಲೆಯನು ತಾನು
ಅಧಿಕ ಕಷ್ಟವ ಗೊಳಸೆ
ಪದುಮನಾಭ ನೀನೆ ಪೊರೆಯಬೇಕೆನ್ನಲು
ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1
ತರಳನಾದ ಧ್ರುವನು ಪ್ರಹ್ಲಾದನು
ಶರಣೆಂದು ಮೊರೆವೋಗಲು
ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು
ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2
ಮಾನಿನಿ ದ್ರೌಪದಿಯು ತನ್ನಯ ಘನ
ಮಾನಭಂಗದ ಕಾಲದಿ
ದೀನರಕ್ಷಕ ಕೃಷ್ಣ ದಾನವಾರಿಯೆನೆ
ಸಾನುರಾಗದಿಂದಲಕ್ಷಯ ವರವಿತ್ತ3
ಅಜಮಿಳ ಬಹುಪಾಪದಿ ಮೆರೆಯುತಲಿದ್ದು
ನಿಜಸುಖ ಮರೆತಂತ್ಯ ಕಾಲದಿ
ಬಜಬಜಿಸುತಮಗನನು ಹೆಸರೆತ್ತಲು
ಭಜನೆಯಾಯ್ತು ನಾರಾಯಣ ನಾಮವು 4
ವಿದುರನುಧ್ದವನರ್ಜುನ ಕುಚೇಲನು
ಮೊದಲಾದ ಭಕ್ತರೆಲ್ಲ
ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ
ಪದವಿಯಿತ್ತು ಕಾಯ್ದ ಜಾಜಿಯೀಶನ5