ಬೆರಗದಿರು ಮನವೇ ನೀ ತತ್ವವನು ತಿಳಿಯದೆ
ಮರುಗಬೇಕಾಗುವುದು ಅವಿವೇಕಕೆ ಪ
ಸಿರಿಯರಸ ನರಹರಿಯ ಮರೆತು ಬಾಳುವ ನರನು
ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ
ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ
ತನುಭೋಗವಲ್ಲವೊ ಅದರ ಫಲವು
ವನಜನಾಭನ ಮನದಿ ನೆನೆನೆನೆದು ದಿವ್ಯ ಸ
ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1
ಭವಮೋಹದಿಂದ ನೀ ಘನ ಪಾಪಗಳ ಮಾಡಿ
ಧನಿಕನೆಂದೆನಿಸಿದರೆ ಎಣಿಕೆ ಬಾರದೋ
ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ
ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2
ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ
ಕಾಮಿತಕೆ ಬಿದ್ದು ನಿರ್ನಾಮವಾಗದಿರೊ
ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ
ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3
ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ
ನಿನ್ನವರು ಯಾರೆಂದು ಪೇಳಲಳವೇ
ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು
ಪನ್ನಗಶಯನ ಪ್ರಸನ್ನನಾಗುವನು 4