ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ
ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ
ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ
ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ
ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1
ನಂಬಿಗುಳ್ಳವನಂತೆ ಹೇಳುವ ಪರರ
ಅಂಬುಜಾಕ್ಷಯರೊಲುಮೆ ಹಂಬಲವ ಮನದಿ
ತುಂಬಿಕೊಂಡಿಹ್ಯ ಎನ್ನಡೊಂಕ
ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2
ಸಫಲಮಾನಿಸನಂತೆ ಜಪಮಾತುಗಳಾಡಿ
ಕಪಟತ್ವದಿಂದಿತರ ಅಪಹರಿಸುವ
ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ
ಸುಫಲದಾಯಕ ಹರಿ ಕೃಪೆಮಾಡು ಜವದಿ 3
ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ
ಬಸವಳಿದು ಬಾಯಾರಿ ದೆಸೆಗೆಟ್ಟು ಪರರ
ಅಶನ ಬೇಡುಂಬ ಪುಸಿಯ ಮನಸಿನ ಡೊಂಕ
ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4
ಪಾಮರಮನದ ದುಷ್ಕಾಮಿತಗಳನೆಲ್ಲ
ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ
ನಾಮಧ್ಯಾನದ ನಿತ್ಯನೇಮವನು ಪಾಲಿಸಿ
ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5