ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುನಿಯ ನೋಡಿದಿರಾ ಮಾನವರಾ ಪ ಮಾಡಿರಿ ಪೂಜೆಯನು ನೀಡಿರಿ ಭಿಕ್ಷವನು ರೂಢಿಯೊಳಗೆ ಇವ ಗೂಢ ದೇವಾಂಶನು1 ಬೆಳಗಿರಿ ಆರುತಿಯ ಸುಲಲಿತ ಕೀರುತಿಯ ಇಳೆಯೊಳು ಪಾಡಿರಿ ಚೆಲುವ ಸನ್ಯಾಸಿಯ 2 ಶ್ರೀಶನ ತೋರುವನು ದೋಷವ ಕಳೆಯುವನು ದಾಸ ಜನರಿಗೆ ಇಂದಿರೇಶ ಸುಪ್ರೀಯನು 3
--------------
ಇಂದಿರೇಶರು
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು