ಒಟ್ಟು 70 ಕಡೆಗಳಲ್ಲಿ , 31 ದಾಸರು , 65 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

4. ಗೊರೂರು ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ ದುರುಳ ಮಾನವರಿಟ್ಟೆಡೆಯಲಿರುವೆಂಬಾಗ ಸುರರು ಮ ತ್ಸರಿಪಾಗ ನರಸಿಂಹ ಶರಣೆನ್ನು ಮನವೇ 1 ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ ಮೃಗರಾಜವದನ ಶರಣೆನ್ನು ಬಿಡದೆ ಮನವೇ 2 ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ ಅಖಿಲ ಪಾತಕದ ನೆರೆಕಾಲಲೊದೆವಾಗ ಮಖಮಥನ ಕಮಲಭವಮುಖ ದಿವಿಜವಂದ್ಯಪದ ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] 3
--------------
ಬೇಲೂರು ವೈಕುಂಠದಾಸರು
ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
ಅಣು ಮಹತ್ತಾದ ದೇವ ಪ ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳಗುಣಭರಿತ ಪರಮ ಪಾವನ ಚರಿತ ಎನ್ನ ನಿರ-ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬನೆನಹನೊಲಿದಿತ್ತು ಸಲಹಯ್ಯ ಅ ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿಮಾಡಿರುವ ಪಾತಕವು ವ್ಯಾಧಿರೂಪಗಳಿಂದಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿತೀಡಿ ಬಸವಳಿದ ಬಳಿಕನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲುಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ-ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವಪಾಡಿ ಪೊಗಳುವುದ ಕರುಣಿಸಯ್ಯ 1 ಕಂದ ಬಾರೆಂತೆಂದು ಶೋಕಿಪ ಜನನಿ ಜನಕನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿಅಂದವಾಗಿಹ ಮಂದಿರಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ-ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು-ಕುಂದ ಮುಕುತಿಯನೊದಗಿಸಯ್ಯ 2 ಅಚ್ಯುತ ಮುರಾರಿ ಹರಿಯೆಂಬಮಾತನಾಡಿಸಿ ಮುಕುತಿಯೊದಗಿಸಯ್ಯ 3
--------------
ಕನಕದಾಸ
ಆತ್ಮನಿವೇದನೆ ನೆಂತು ಪೂಜಿಸಿದೆನೈ ನೀರಜಾಕ್ಷ ಪ ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು ಮಂಗಳದ ನಾಮ ಮುದ್ರೆಗಳ ಧರಿಸೀ ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1 ನಿರ್ಮಲೋದಕದಿಂದ ಅಭಿಷೇಚನವ ಗೈದು ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2 ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ ಅರ್ಭಕನು ನಾ ಕನಕರತ್ನಾಭರಣಗಳನು ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3 ಧೂಪದೀಪಗಳಿಂದ ವಾದ್ಯ ವೈಭವದಿಂದ ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4 ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ ಭವರೋಗಪೀಡಿತನು ನಾ ನಿನ್ನ ಹವಣರಿತು ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5 ಸರ್ವಶಕ್ತನು ನೀನು ಸರ್ವಜ್ಞಪತಿ ನೀನು ಸರ್ವದಾ ತೃಪ್ತನೋ ನಿಗಮವೇದ್ಯಾ ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ ಗರ್ವಿಶಠನಜ್ಞತಮನೆನಗೆ ವಶವೇ 6 ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
--------------
ರಘುರಾಮವಿಠಲದಾಸರು
ಉ. ದಾಸವರ್ಯ ಸ್ತುತಿ ವಿಜಯದಾಸರು ಬಾಲೆಯರ ಪಾಲಿಸೈ ದೀನಜನ ಪಾಲ ವಿಜಯಾಖ್ಯ ರಾಯಾ ಪ ಅಚ್ಚರವಲ್ಲ ಜೀಯಾ ಅ.ಪ. ಘನ ವ್ಯಾಧಿಯಂ ಪೀಡಿತಳಾಗಿ ಸೇವಿಸೆ ನೀನಾಗಿ ವಲಿದು ಅಭಯವನಿತ್ತು ನಿನ್ನ ದಾಸನೆಂದುಪದೇಶಿಶಿ ಜರಿದು ದೂರ ನೋಡುವರೇ ಪರಮ ಕರುಣಾಶರಧಿ ನಿನ್ನ ದ್ವಂದ್ವಗಳಿಗಭಿವಂದಿಪೆ 1 ಅನ್ಯಳಲ್ಲವೋ ರಾಯಾ ನಿನ್ನ ಪರಮ ಪ್ರೀತ್ಯಾಸ್ಪದನ ತನುಜಳೋ ಸದ್ಭಕುತಿಯುಳ್ಳವಳು ಸಲ್ಲೇಲ ಸಂಪನ್ನೆ ಸತ್ಯಭೇದ ಜ್ಞಾನ ಸಚ್ಚಿತ್ತಪುರಿರಾಜನಿಂದ ಪಡೆದು ನಿನಗೆ ಸರಿಯಾಗಿ ತೋರಿದ ಬಳಿಕ 2 ಬಹೂಪರಿಯಿಂದ ಬೇಡುವೆನೊ ತವಚರಣ ನಂಬದ ಶರಣೆಯೆಂತೆಂದು ಕಣ್ತೆರೆದು ಕರುಣಿಸೊನಿನ್ನ ಶರಣರೊಳು ಶರಣಾಧಮನಯ್ಯ ಉದಾಶಿಸದೆ ಸಲಹು ತಂದೆವರದಗೋಪಾಲವಿಠ್ಠಲನ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಎಂತು ಮೀರುವೆ ಮಾಯವಾ ಪ. ಮಾಯಾ ಕಂತು ಕಂತು ಜನಕ ಹರಿಯೆ ಸಂತತ ಗೃಹಧನ ಭ್ರಾಂತಿಗೆ ಸಿಲುಕುತಾ ತಂತ್ರವಾದೆನು ಸರ್ವತಂತ್ರ ನೀ ಕರುಣಿಸು ಅ.ಪ. ದೇಹವೆ ನಾನೆಂಬ ಮೋಹದಿ ಬಹು ವಿಧ ಮೋಹಗೊಂಡನುದಿನವು ಆಹಾರ ನಿದ್ರಾ ಮೈಥುನಗಳೆ ಗತಿ ಎಂಬ ಹಾಹಾಕಾರವು ಬಿಡದು ಇಹಪರಗಳ ಸನ್ನಾಹ ಒಂದನು ಕಾಣೆ ಗೇಹಾಂಧಕೂಪಮಹಾಹಿಮುಖದಿ ಸಿಕ್ಕಿ 1 ವೇದವಿಹಿತ ಕರ್ಮವಾದರು ಮಾಡದೆ ಸಾಧು ಮಾರ್ಗವ ಮೀರಿದೆ ಮಾದಿಗನಂತೆ ಮನಸಿನಲಿ ಬಹು ವಿಧ ಕಪಟ ತಾಳಿದೆ ವ್ಯಾಧಿ ಪೀಡಿತ ದೇಹ ಬಾಧೆಯ ಸಹಿಸದೆ ಶ್ರೀದ ನಿನ್ನಯ ಪದ್ಮ ಪಾದವೆ ಗತಿಯೆಂಬೆ 2 ಮತಿವಂತ ಜನರ ರಕ್ಷಿಪುದು ದುರ್ಘಟವೆ ಶ್ರೀ- ಪತಿ ನಿನಗುಸುರುವದೆ ಶತಕೋಟಿ ಮಿತ ಜನ್ಮಾರ್ಜಿತ ಪಾಪ ತತಿ ನೀ ಸಂ- ಸೃತನಾಗೆ ನಿಲುವುಂಟೆ ಪತಿತ ಪಾವನನೆಂಬ ಪರಮಾತ್ಮ ಶೇಷಾದ್ರಿ ಪತಿ ನೀನೆ ಗತಿಯೆಂದು ಸತತ ನಂಬಿದೆ ದೇವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂಥಾ ಮಹಿಮರು ನೋಡಿ - ಶ್ರೀ ರಾಘವೇಂದ್ರರು ಎಂಥಾ ಮಹಿಮರೋ ಪ ಕೊನೆಗಾಣೆನಿವರ ಅದಭುತ ಮಹಿಮೆಯನ್ನು ಅ.ಪ. ವರ ಮಂತ್ರಾಲಯದೊಳು ಬಂದು ನಿಂದಿಹರು 1 ನಿಮ್ಮ ಸ್ತುತಿಸಿ ಕೊಂಡಾಡುತಿಹರು 2 ಒಂದೇ ಮನದಿಂದ ಒಂದು ಪ್ರದಕ್ಷಿಣೆ ನಮಿಸಲು ಭವಬಂಧಗಳ ಬಿಡಿಸಿ ಆನಂದದಿ ಸಹಲುವರು 3 ಮೊದಲು ನಿಮ್ಮ ಸೇವಿಸೆ ಪಾವನಗೊಳುವರು4 ಪೀಡೆ ಪಿಶಾಚಿಗಳಿಂದ ಪೀಡಿತರಾಗುತ ನಿಮ್ಮಡಿಗೆರಗಲು ಕಡುದಯ ಮಾಡುವಿರಿ5 ಶ್ರೀರಾಘವೇಂದ್ರಾಯ ನಮಃ ಎಂಬ ದಿವ್ಯನಾಮವ ಪಠಿಸಲು ಪ್ರಭುಗಳು ಪಾವನ ಮಾಡುವರು 6 ಧರೆಯೊಳು ನಿಮ್ಮ ಸರಿಯಾರಿಹರೊ ಪ್ರಭು ಗುರುಸಾರ್ವಭೌಮರು | ಶ್ರೀ ರಾಘವೇಂದ್ರರು7
--------------
ರಾಧಾಬಾಯಿ
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಒಳ್ಳೆವಾಜಿಯ ಕಲಿತಿದ್ದಿತಾಳೊ ಬುದ್ಧಿಲ್ಲ ಕೇಳೊಒಳ್ಳೆ ವಾಜಿಯ ಕಲಿತಿ ತಾಳೊಸುಳ್ಳು ಕೆಲಸವ ಹೇಳಿ ಸುಳಿಯುವಿ ನೆರೆಮನೆಯಚಲುವನರಿಯುತ ಚಲುವೆರಿಬ್ಬರ ಕುಚೋದ್ಯದಲಿ ಪ. ಹೆಣ್ಣು ಕೊಟ್ಟವನಿಗೆ ಕಣ್ಣು ಕಾಣದು ಏನೊಇನ್ನೆಲ್ಲಿ ವರನ ಕಾಣದೆ ಇನ್ನೆಲ್ಲಿ ವರನ ಕಾಣದೆ ಇಂಥವಗೆಹೆಣ್ಣು ಕೊಟ್ಟವನು ಬಲು ಹೇಡಿ 1 ಕೊಟ್ಟರೇನಾಯಿತು ಅಟ್ಟುಣಲು ಬಲ್ಲಹುಟ್ಟು ಗತಿಯಂತು ಮೊದಲಿಲ್ಲಹುಟ್ಟು ಗತಿಯಂತು ಮೊದಲಿಲ್ಲ ದಾನವಕೊಟ್ಟ ಬಲೀಂದ್ರ ಇದು ಬಲ್ಲ 2 ಕುಲವಿಲ್ಲಗೋತ್ರವಿಲ್ಲ ನೆಲೆಯಿಲ್ಲ ಆಚಾರವಿಲ್ಲಬಲುದೈತ್ಯರೊಳು ಹಗೆಯಾದ ಬಲುದೈತ್ಯರೊಳು ಹಗೆಯಾದ ಇಂಥವಗೆ ಜಲನಿಧಿ ಮಗಳ ಕೊಡಬಹುದೆ 3 ಮೂರು ಗುಣಗಳ ಮೀರಿದವ ನೀಚನೆನಿಸುವ ಇವನು ನೀಚನೆನಿಸುವಇವನ ಗುಣಯಾರು ಅರಿಯರು ಧರೆ ಮ್ಯಾಲೆ4 ಹಾಲು ಕೆನೆಯ ಕದ್ದು ಬಾಲೆರೆಲ್ಲರಪೀಡಿಸಿಬಾಲನಾಗಿ ಒರಳ ಎಳೆಯುತಬಾಲನಾಗಿ ಒರಳ ಎಳೆಯುತಜನನಿಗೆ ಚಾಲವರೆದದ್ದು ಮರೆತೇನೊ5 ಬೆಣ್ಣಿ ಮೊಸರು ಕದ್ದು ಹೆಣ್ಣುಮಕ್ಕಳ ಕಾಡಿಸಿ ಮುನ್ನ ತೊತ್ತಿನ ಮನೆಯಲ್ಲಿಮುನ್ನ ತೊತ್ತಿನ ಮನೆಯಲ್ಲಿ ಉಂಡುನೀ ಹೆಣ್ಣಾಗಿದ್ಯಲ್ಲೊ ರಮಿಯರಸು6
--------------
ಗಲಗಲಿಅವ್ವನವರು
ಕಾಯೋ ಪರಮಾನಂದಾ ನಾರಾಯಣಾ | ತೋಯಜಾದಳ ನಯನ ಗರುಡ ಗಮನಾ ಪ ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ | ಭರದಿಂದ ನಿನ್ನ ಸ್ಮರಣೆಯಾ ಮಾಡಲು | ತ್ವರಿತದಿಂದಲಿ ದೇವ ಬಂದು ಆತನ ಮಹಾ | ದುರಿತವನು ಪರಿಹರಿಸಿ ಕಾಯಿದೆ ಹರಿಯೇ1 ಅರಗಿನಾ ಮನಿಯೊಳುಪಾಂಡವರುಸಿಲುಕಿರಲು | ಹರಿ ನೀನೇ ಗತಿಯೆಂದು ಸುಮ್ಮನಿರಲು | ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ | ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ2 ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು | ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ | ಕರುಳ ಬಗೆದುಕಾಯಿದೆ ಹರಿಯೇ | ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ3 ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ | ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು | ಕಪಟನಾಟಕ ದಯಾನಂದ ಹರಿಯೆ 4 ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ | ಮುರಹರಿ ಧ್ಯಾನ ಸ್ಮರಣೆ ಯಂಬನದನು | ದಾರಿಯನು ಅರಿಯದ ಅಜ್ಞಾನಿಯ ಪರಾಧವನು ಸೈ ರಿಸುದು ಮಹಿಪತಿ ಸುತ ಪ್ರಿಯನೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ ಅಸುವನೀಗಲು ನಾನ್ಹಸಗೆಟ್ಟು ಬೇಡದ ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ 1 ಅತಿಶಯದ ಬಡತನವು ಸತತ ಪೀಡಿಸಲೆನಗೆ ಗತಿಯಿಲ್ಲದವವೆನುತ ಸತಿಸುತರು ಜರಿಲಿ ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು ಹಿತದಿಂದ ತೊಲಗಿಸೈ ರತಿಪತಿಪಿತನೆ 2 ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು ಹರಕೊಂಡು ಹೋಗಲಿ ಹರಿ ಕರುಣದೋರೊ ನರಕಿಯೆನಿಸುವ ಮಹ ತಿರಕಿ ಸಂಸಾರದ ಮರುಕವನು ಪರಿಹರಿಸೊ ಪರಕೆ ಪರತರನೆ 3 ಊರು ನಾ ಸೇರಿರಲಿ ಅರಣ್ಯದೊಳಗಿರಲಿ ಮೀರಿದ ರೋಗದಿಂ ಘೋರ ಬಡುತಿರಲಿ ಆರೈಸದಾರನ್ನು ಸಾರಸಾಕ್ಷನೆ ನಿನ್ನ ಪಾರನಾಮದ ಸವಿ ಸುಸಾರ ಎನಗಿರಲಿ 4 ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ ಕೊಡುವುದಾದರೆ ನೀನೆ ಕೊಡು ಎನಗೆ ಇದನು ಪೊಡವಿಯವರಿಗೆ ಬಾಗಿ ಬೇಡದ ಪದವಿಯನು ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ 5
--------------
ರಾಮದಾಸರು
ಗುರು ಶ್ರೀಶಪ್ರಾಣೇಶವಿಠಲರ ಹಾಡು ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ |ಹ್ರಾಸಿಸೋ ದೋಷ ಕುಟಿಲ |ಭಾಷಾವರ್ಜಿತ ಗುಪ್ತಘೋಷ ನಂಬಿದೆ ನಿನ್ನ |ದಾಸರೊಳಗೆಣಿಸೆನ್ನ ಪೋಷಣ ಕರ್ತೆನೆ ಪ ಪಾದ |ಘಟಸೆನಗಭಯವ | ಪಟುತರಂಕಿತ ಗುರುಪ್ರಾಣೇಶ |ವಿಠಲದಾಸವರ್ಯರ ದ್ವಾರದಿ ||ಧಟದಿ ಪಡೆದಲೆಲೋಕ ಖ್ಯಾತದಿ |ಚಟುಲ ಜ್ಞಾನಾನಂದ ಭೂಷಣ 1 ಅನ್ಯ ಬಯಕೆಯ ಬಿಡಿಸಿ | ನಿನ್ನಯ ಸ್ಮರಣೆ |ಪುಣ್ಯ ಪಥವ ಪಿಡಿಸಿ | ಧನ್ಯನ ಮಾಡೊ ಸಂ |ಪನ್ನ ಗುಣಾರ್ಣ ಸೌ | ಜನ್ಯ ಪರಾತ್ಪರ ಪೂರ್ಣ ಸುಲಕ್ಷಣ ||ಪೀಡಿಸುವ ದುವ್ರ್ಯಸನ | ಕಳದೆ ನ್ನಾಡಿಸೈ ಸರ್ವಜ್ಞ ಮತದಲಿ |ಬೇಡಿಸೈ ಗುರುದಾಸ ಭಾಗ್ಯವು |ಕೊಡಿಸೈ ತವ ಶಿಷ್ಯ ವರ್ಗದಿ 2 ತ್ರಿಕಾಲದಲಿ ಕರ್ನವು | ವಾಕಿಸುವ ತೆರದಿ ನೀವು |ಲೋಕೋಪಕಾರಲೋಸುಗದಿ | ಲೋಗರನ್ನೆಲ್ಲ |ಸಾಕಂತ ಸೇವಿಪೆ | ವಾಕ್ಪತಿ ಜನಕನ |ಗಣ್ಯಗಾಣಿನು ನಿನ್ನ ಅನುಗುಣ್ಯ ಗುಣಕತಿ |ಘನ್ನ ಗುರು ಶ್ರೀಶ, ಪ್ರಾಣೇಶ ವಿಠಲ ಕಿಂಕರನಾಗಿ ಬಾಳ್ದೆ |ಪುಣ್ಯ ಶಿಲಾಗ್ರಗಣ್ಯಧೀರ 3
--------------
ಶ್ರೀಶಪ್ರಾಣೇಶವಿಠಲರು
ಗೋಪಾಲ ದಾಸರಾಯ ನಿನ್ನಯ ಪಾದ ನಾ ಪೊಂದಿದೆನೊ ನಿಶ್ಚಯ ಪ ಈ ಪೀಡಿಸುವ ತ್ರಯತಾಪಗಳೋಡಿಸಿ ಕೈ ಪಿಡಿದೆÀನ್ನ ಕಾಪಾಡಿದ ಗುರುರಾಯ ಅ.ಪ. ಘೋರ ವ್ಯಾಧಿಯನೆ ನೋಡಿ | ವಿಜಯರಾಯ ಭೂರಿ ಕರುಣವ ಮಾಡಿ ತೋರಿದರಿವರೆ ಉದ್ಧಾರಕರೆಂದಂದಿ ಪಾದ ಸಾರಿದೆ ಸಲಹೆಂದು || ಸೂರಿಜನ ಸಂಪ್ರೀಯ ಸುಗುಣೋದಾರ ದುರುಳನ ದೋಷ ನಿಚಯವ ದೂರಗೈಸಿ ದಯಾಂಬುನಿಧೆ ನಿ ವಾರಿಸದೆ ಕರಪಿಡಿದು ಕರುಣದಿ ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ 1 ಅಪರಾಧಗಳ ಮರೆದೆ ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದಲಿ ಕೃಪಣ ವತ್ಸಲ ನಿನ್ನ ಕರುಣೆಗೆ ಉಪಮೆಗಾಣೆನೊ ಸಂತತವು ಕಾ ಶ್ಯಪಿಯೊಳಗೆ ಬುಧರಿಂದ ಜಗದಾ ಧಿಪನ ಕಿಂಕರನೆನಿಸಿ ಮೆರೆಯುವ 2 ಎನ್ನ ಪಾಲಿಸಿದಂದದಿ ಸಕಲ ಪ್ರ ಪನ್ನರ ಸಲಹೊ ಮೋದಿ ಅನ್ಯರಿಗೀಪರಿ ಬಿನ್ನಪ ಗೈಯೆ ಜ ಗನ್ನಾಥ ವಿಠಲನ ಸನ್ನುತಿಸುವ ಧೀರ || ನಿನ್ನ ನಂಬಿದ ಜನರಿಗೆಲ್ಲಿಯ ಬನ್ನವೋ ಭಕ್ತಾನು ಕಂಪಿಶ ರಣ್ಯ ಬಂದೆನೊ ಈ ಸಮಯದಿಅ ಹರ್ನಿಶಿ ಧ್ಯಾನಿಸುವೆ ನಿನ್ನನು 3
--------------
ಜಗನ್ನಾಥದಾಸರು
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1 ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2 ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ