ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿರೋ ಕೇಳಿರೋ ಆನಂದ ನುಡಿಗಳ | ಜಾಳಿಲಿ ದೋಷವ ಹರಿನಾಮ ನೆನೆಯುತ | ಕೇಳಿ ಕೇಳಿ ಕೇಳಿ ಕೇಳಿ ಪ ಯುಗದಂತಿಲಿ ಸರ್ವ ಮತವೆಲ್ಲ ಕೆಡಲಾಗಿ | ಜಗದೋದ್ಧಾರ ಜಗದೀಶ ಬರು ತಾನೆ 1 ಸ್ವ ಶಕ್ತಿ ಕುದುರೆಯ ನೇರಿ ರಾವುತನಾಗಿ | ಅಸಮ ಪೊನ್ನೀಟೆಯ ಹಿಡಕೊಂಡು ಬರುತಾನೆ2 ನಾಕು ವೇದಗಳೆಂಬಾ ಕುದುರೆಯ ಕಾಲವು | ಬೇಕಾದ ಅವಯವ ಆರು ಶಾಸ್ತ್ರಗಳಿವೆ3 ಮೂರು ಪೌರಾಣ ಶೃಂಗಾರಾಭರಣವು | ಶರಣವತ್ಸಲನೆಂಬ ಕಡಿವಾಣ ಕುದುರೆಗೆ4 ಬೋಧ ಹಕ್ಕರಿಕೆಯು | ಭಾವಿಸೆ ಭೂ ಭಾಗವೆಂಬುದು ಪಾವುಡವು5 ಈ ಪರಿಯಿಂದಲಿ ಭೋರ್ಗರೆವುತ ಬರೆ | ತಾಪವಡಗಿ ಸುಖ ತಂಗಾಳಿ ಬಂದೀತು 6 ತಾಯಿಯ ಧ್ವನಿ ಕೇಳಿ ಮಕ್ಕಳು ಬಹುಪರಿ | ಬಾಯ ದೆರವುತಲಿ ಜನಜಡಿ ಬಹುದು7 ಅವರಿ-ಗಭಯ ಕೊಟ್ಟು ಅಧರ್ಮವೇ ಕಿತ್ತಿ ಯವನರ ಹಂತಿಯ ಕಟ್ಟಿ ತಾ ತುಳಿಸುವ 8 ಹೊಟ್ಟವ ಹಾರಿಸಿ ಘಟ್ಟಿ ತಾ ಉಳಹುವ | ಸೃಷ್ಟಿಲಿ ಧರ್ಮ ಸಂ-ಸ್ಥಾಪನೆ ಮಾಡುವಾ 9 ಮೊದಲಂತೆ ಜಗವನು ಸುಖದಲಿ ಇಡುವನು | ಮುದದಿಂದ ಸಾರಿದ ಗುರುವರ ಮಹಿಪತಿ 10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು