ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆ ನುಡಿಯ ನೋವು ಬಂದೀತು ನೋವು 1 ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು 2 ಬಡವನಾಗಿಹ ನೋವು ಒಡೆಯರಿಲ್ಲದ ನೋವು ಕೇಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು 3 ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು ಬದ್ಧವಾಗಿಹ ನೋವು ಬಳಲುವ ನೋವು 4 ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ ಅಂತರಂಗದಿ ಬಂದು ಚಿಂತಿತಾರ್ಥತವನೀಯೊ ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5
--------------
ವರಹತಿಮ್ಮಪ್ಪ
ಭರಬರನೆ ಬಾಜಾರಕೆ ನಾ ಬಂದೆನಯ್ಯ ಚಿದಾನಂದನ ಮರೆಯಲಿಕೆ ಪ ಐವರು ಗೌಡರು ಕಟ್ಟಿದ ಪೇಟೆ ಆ ಪೇಟೆಗೆಐದು ನಾಲ್ಕು ಬಾಗಿಲುಗಳುಐದು ಮಂದಿ ಸೆಟ್ಟರು ಸೇರಿಹರು ಆವರಲ್ಲಿಯೆಐದು ಮಂದಿ ಚಲವಾದಿಗಳು1 ಭಾರ ನೇಮಲ್ಲಿದೆ 2 ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆಪಡುವಲ ಕೋರಿ ಶೆಟ್ಟಿಗಳೇಕಡುಕರ್ಮಿ ಕೋಮಟಿ ಶೆಟ್ಟಿಗಳೇ ಬಾಯಿ ಘನವಾಗೆಬಡಬಡಿಪ ಪಟ್ಟಣ ಶೆಟ್ಟಿ 3 ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿತಾಪವೆಂಬ ಜವಳಿ ಅಂಗಡಿಯೆಕೋಪವೆಂಬ ಕುಪ್ಪಸ ದಂಗಡಿಯೇಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ 4 ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆನಾಚಿಕೆಯಿಲ್ಲದ ಕಂಚಿನಂಗಡಿಯೇಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿಕೋಚು ಮಾಡೋ ಉದ್ದಿನಂಗಡಿಯೇ 5 ತನು ವ್ಯಸನವೆಂಬ ತಾಡಪತ್ರಿ ತೋರಲಾಗಿಮನವ್ಯಸನವೆಂಬ ಕಿಂಕಾಪುಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆಜನ ವ್ಯಸನವೆಂಬೋ ಜರತಾರಿಯೇ6 ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆಜ್ಞಾನಶೂನ್ಯ ಜಾಜಿಕಾಯಿಮಾನ ಹಾನಿಯೆಂಬೋ ಜಾಪತ್ರಿನಾನು ನನ್ನದು ಎಂಬ ಭಂಗಿ ಸೊಪ್ಪು7 ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದನೋವು ಕಷ್ಟಗಳೆಂಬ ಗಾಂಜಿಯೇಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋನಾನು ನೀನು ಎಂಬ ಚಿಲುಮೆಗಳೋ 8 ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬವಜ್ರದಹರಳೇ ಹಾದಿ ಕಾಣೆನೆಂಬ ಹವಳದ ರಾಶಿಯೇ ಹರಡಿದ್ದಾವೆಗಾದೆ ಎಂಬ ಸೂಜಿದಬ್ಬಣವೇ 9 ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವಘೋರ ತಾಪತ್ರಯದ ತಟ್ಟೆಯೇನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆಸೂರಿಯ ಸುಕೃತವೆಂಬೋ ತುಬಾಕಿಯೇ10 ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿದಾರಿಯಿಲ್ಲದ ದೊಡ್ಡಿಲಕಾಯಿಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆಮರುಳು ಎಂಬ ಮಾವಿನಕಾಯಿ11 ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆಕಂಟಕ ಎಂಬೋ ಹರಿವೆ ಪಲ್ಲೆಯೇಕೊಂಟೆಯೆಂಬೊ ಬಸಲೆ ಪಲ್ಲೆಯೇ ತೀವ್ರದಲಿತ್ತೆಶುಂಠವೆಂಬೋ ಬೆರಕೆ ಪಲ್ಲೆಯೇ 12 ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇರಂಗು ಎಂಬೋ ರಾಗಿ ರಾಶಿಯೇಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆಹಿಂಗದೀಪರಿ ದಿವಾರಾತ್ರಿಯೇ 13 ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆವಿಕಲ್ಪೆಂಬೋ ಧಾರಣೆಯಿಳಿವುದೇಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿಕಾಕಧಾವಂತರ ಸಂಧಾನವೇ 14 ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದುರಾಮನೆಂಬ ಸ್ಮರಣೆ ಕದ್ದಿಹರೋಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆಆ ಮಹಾಜ್ಞಾನವ ಸುಲಿದಿಹರೋ15 ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟುಹೊರಡುವ ತೆರನ ಕಾಣೆನೇಕರುಣಿಯಾಗಿ ಕೈ ವಿಡಿವರಾರೋಕರುಣಾಕರ ಹರ ವಿಶ್ವೇಶನೇ ಬಲ್ಲ 16 ಚಿಂತೆ ನಾನು ಮಾಡುತಿರಲಾಗಿ ಚಿದಾನಂದಚಿಂತೆ ಬೇಡೆಂದು ಮುಂದೆ ನಿಂದಿಹನುಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿಎಂತು ಪೇಳಲಿ ಎನ್ನೆದುರು ನಿಂದಿಹನೆ17
--------------
ಚಿದಾನಂದ ಅವಧೂತರು
ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ 1 ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| 2 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ದತ್ಯಧಿಕ-ಕೊರತೆಯೆಂಬ ||ಮಟ್ಟು|| 3 ಜ್ಞಾನವಂತನೆಂದು ಬಹುಮಾನವಂತನಾದರೂ ಅ ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ4 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ5 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||6 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||7 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||8 ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ 9 ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| 10 ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||11 ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ ವರದವಿಠಲನೆಂಬ ||ಮಟ್ಟು|| 12
--------------
ಸರಗೂರು ವೆಂಕಟವರದಾರ್ಯರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ ಶ್ರೀಕರನ ಸರ್ವತ್ರ ಸ್ಮರಿಸುತ ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ ಸಾಕುವನು ಸಕಲೇಷ್ಟದಾಯಕ ಪ. ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು ದಾನ ಧರ್ಮ ಪರೋಪಕಾರ ನಿಜಾನುಪಾಲನವು ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ- ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1 ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ ಮಾಡುವ ರಾಜನಿರುತಿರೆ 2 ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ ತಾಪ ಹೊಂದದೆ ಭೂಪರಂತಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ
ನಿಂದಕರಿರಬೇಕಿರಬೇಕುಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
--------------
ಪುರಂದರದಾಸರು