(ಭಗವದ್ಭಕ್ತ ಸಂಮೋಹ ಪ್ರಾರ್ಥನೆ)
ಗಜಮುಖನ ಪ್ರಪಿತಾಮಹನಹಿಮನ
ಗಜೆಯರಸನ ಪಿತನ ಪೆತ್ತನ
ಸಾರಥಿ ಪಾದ ಪಂಕಜವ
ಭಜಿಸಿ ಭಾರತಿವರನ ನಮಿಸುವೆ
ಅಜಭವಾದಿ ಗುರೂತ್ತಮರ ನಿಜ
ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1
ಅವ್ಯವಹಿತಾಸದೃಶ ಭಕ್ತಿಯ
ಸವ್ಯಸಾಚಿ ಸಹಾಯ ಸಲಿಸಾ
ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ
ಕಾವ್ಯ ವ್ಯಾಕರಣಗಳಿಂದ ವಹಿಸಿದ
ಸೇವ್ಯ ಗುರು ಲಾ-
ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2
ಪುಂಡರೀಕ ದಲಾಯತಾಕ್ಷನೆ
ಹಿಂಡು ದೈವದ ಗಂಡನೆಂದತಿ
ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ
ಪಾಂಡ್ಯದೇಶದೊಳವತರಿಸಿದಾ
ಖಂಡಲಾತ್ಮನ ನಮಿಪೆ ಮಮ ಹೃ-
ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3
ಮೋದತೀರ್ಥ ಮಹಾಬ್ಧಿಯನು ಕಡೆ-
ದಾದಿಯಲಿ ನ್ಯಾಯಾಮೃತವ ತೆಗೆ-
ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ
ಮಾಧವನ ಗುಣತರ್ಕ ತಾಂಡವ
ವೋದಿಸುತ ಚಂದ್ರಿಕೆಯ ತೋರಿದ
ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4
ಮಂಗಳಾಂಬುತರಂಗ ತುಂಗಾ
ಸಂಗಿ ಮಂತ್ರಾಲಯದಿ ನಿಂದು ಕು
ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ
ಪಂಗು ಬಧಿರಾದ್ಯಂಗ ಹೀನರ
ಪಾಂಗ ನೋಟದಿ ಪಾಲಿಸುವ ಯತಿ
ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5
ಜೋಲಿಸುವ ಕಂಠದಲಿ ತುಳಸೀ
ಮಾಲೆಯನು ಕರಯುಗದಿ ವೀಣಾ
ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ
ಶ್ರೀಲಲಾಮನ ಲೀಲೆಗಳಿಗನು-
ಕೂಲರಾದ ಸುರರ್ಷಿ ನಾರದ
ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6
ಸತ್ಯಭಾಮಾಕಾಂತನಿದಿರಲಿ
ನಿತ್ಯ ನಡೆಸುವನೆಂಬ ಸೇವೆಗೆ
ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ
ಹತ್ತು ದೆಶೆಯಲಿ ನಿಂತು ರಕ್ಷಿಪ
ಕೃತ್ತಿವಾಸ ಸುರೇಶಮುಖ ದೇ-
ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7
ಪಾವಮಾನ ಮತೀಯ ವೈಷ್ಣವ-
ರಾವಳಿಗೆ ಶರಣೆಂಬೆ ನಿಮ್ಮ ಕೃ-
ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ
ದೇವ ದೇವವರೇಣ್ಯ ಭಕ್ತರ
ಕಾವ ಶೇಷಗಿರೀಂದ್ರನಾಥನ
ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8