ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ ಉರಗಕೇತನ ಮೊರೆಯ ಲಾಲಿಸಿ ತರಣಿಜನಿಗೆರಡೊಂದು ಯುಗದಲಿ ಧುರದಿ ಸಾರಥಿಯಾಗಿ ಸ್ಯಂದನ ಭರದಿ ನಡೆಸಿದ ಪರಮ ಪುರುಷನೆ ಅ.ಪ ಶರಣು ಜನ ಸುರಧೇನು | ಹೇ ತಾತ ನೀ ಮೂರೆರಡು ಜನುಮಗಳನ್ನು | ಕಳೆದು ಮ ತ್ತುರುವ ಅವತಾರವನು ಭಕ್ತಿಪೂರ್ವಕ ಪಿರಿಯರಾಜ್ಞದಿ ನೀನು ಪೂರೈಸಲಿನ್ನು ಧರಣಿಯೊಳಗವತರಿಸಿ ನರರಿಗೆ ಅರಿಯದಂದದಿ ಹರಿಯ ದಿಸೆಯೋಳ್ ಹರಿಯ ಸ್ಮರಿಸುತ ಚರಿಪ ಧೊರೆ ತವ ಚರಣ ದರುಶನಗರೆದು ಕರುಣದಿ 1 ಕ್ಲೇಶ ತಡಮಾಡದಲೆ ನೀ ಭವ ಪಾಶ | ದೃಢಮನವ ಕೊಡು ನಿ ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ ಬಿಡದೆ ಮಾಡುಪದೇಶ ಪೊಡವೀಶದಾಸ ಒಡೆಯನೇ ನೀನಡಗಿ ಎನ್ನನು ಕಡೆಗೆ ನೋಡಲು ಪಡೆದ ಜನನಿಯು ಪಿಡಿದು ಬಾಲನ ಮಡುವಿನೋಳ್ ತಾ ಬಿಡುವ ತೆರ ತವ ನಡತೆ ಎನಿಪುದು 2 ಮಂದನಾನಿಜವಯ್ಯ | ಸಂದೇಹವಿಲ್ಲದೆ ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು ರಂದರಾರ್ಯರ ಪ್ರೀಯ ಆನಂದ ನಿಲಯ 3
--------------
ಶಾಮಸುಂದರ ವಿಠಲ
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ನೀನೊಲಿದರೇನು ಏನಿಲ್ಲ ಹರಿಯೆ ಪ ನೀನೊಲಿಯದಿರೆ ಮಾತ್ರ ಏನೇನು ಇಲ್ಲ ಅ.ಪ. ಸಾಧನವು ಸಂಪತ್ತು ಸಾಧಿಸದೆ ದೊರೆಯುವುದುಪಾದಗಳ ಸೇವೆ ತಾ ತಾನಾಗಿ ಲಭಿಸುವುದುಖೇದ ವ್ಯಸನಗಳೆಲ್ಲ ಬಾಧಿಸದಲೋಡುವುದುಸಾಧು ಸಂಗವು ಭಕ್ತಿ ಬೋಧಿಸದೆ ಬರುವವು 1 ವಾಸುದೇವನೆ ವಿಪುಲ ಐಸಿರಿಯನೀಡುತಲೆಬೇಸರದೆ ನಿನ್ನವರ ಲೇಸಾಗಿ ಸಲಹುವೆಯೊದಾಸ ಭಕುತರು ಶೆರಗ ಹಾನಿ ಬೇಡಿದರೇನುಶೇಷಶಯನನೆ ನಿನ್ನ ಈಸು ಮಹಿಮೆಯ ತಿಳಿಯೆ 2 ಮನಸು ನಿನ್ನಡಿಗಳಲಿ ಕೊನೆತನಕ ಇರಿಸುವದುಘನಕೆಲಸ ನಿನದಯ್ಯ ಮನುಜರಿಗೆ ಸಾಧ್ಯವೇತನುಮನಗಳಿವು ನಿನ್ನವೆ ನನದೆಂಬುದೇನುಂಟುಧಣಿಯ ಗದುಗಿನ ವೀರನಾರಾಯಣನೆ ಒಲಿಯೋ 3
--------------
ವೀರನಾರಾಯಣ
ನೋಡಿದೆನೋ ಕೊಂಡಾಡಿದೆನೋ ಪ ಜೋಡಿಸಿ ಕರಗಳ ಬೇಡಿದೆ ಕೃಷ್ಣನ ಅ.ಪ ಮೂಡಲು ಸೂರ್ಯನು ಹಿಮದ ಕಣಗಳಂತೆ ಓಡಿದು ಮೋಹವು ಕೂಡಿತು ಧೈರ್ಯವು ನೋಡಲು ಕೃಷ್ಣನ ಮಂಗಳ ಮೂರ್ತಿಯ ಈಡೇರಿತು ಮನದಾಸೆಯು ಕೃಷ್ಣನ 1 ಕಳೆಯಿತು ದುರಿತವು ಬೆಳೆಯಿತು ಸುಕೃತವು ಸೆಳೆದನು ಮನವನು ತನ್ನಡಿಗಳಲಿ ಬಳಿಯಲಿ ರುಕ್ಮಿಣೀ ಭಾಮೆಯರೊಡಗೂಡಿ ಕೊಳಲೂದುವ ಮಂಗಳಕರ ದೃಶ್ಯವ 2 ಉಕ್ಕಿತು ಹರುಷವು ಪರಮ ದರುಶನದಿ ನಕ್ಕನು ನೋಡುತ ಕರುಣಾಪಾಂಗದಿ ಭಕ್ತ ಪ್ರಸನ್ನನು ತಕ್ಕವನೆಂದೆನ್ನ ಅಕ್ಕರೆಯಿಂದಲಿ ಕರೆಯುವಂತಿರುವುದ 3
--------------
ವಿದ್ಯಾಪ್ರಸನ್ನತೀರ್ಥರು