ಯಾಕೆನ್ನೊಳಿಂತು ನಿರ್ದಯವೆಲೊ ದೇವ
ನೀ ಕರುಣದಿ ನೋಡದಿರಲು ಮತ್ತಾವ ಕಾವ ಪ
ಗಜರಾಜನ ನೀ ಸಲಹಲಿಲ್ಲೇ ಅಂದು
ನಿಜಭಕ್ತ ಪ್ರಹ್ಲಾದನ ಪೊರೆಯಲಿಲ್ಲೇ
ಪರಿ ಎಲ್ಲ ಬಲ್ಲೆ ನಿನ್ನ
ಭಜನೆಯೊಳಿಹ ಎನ್ನನೇಕೆ ನೋಡಲೊಲ್ಲೆ 1
ದ್ರೌಪದಿ ಕರೆಯಲಕ್ಷಯ ವಸ್ತ್ರವ ಕೊಟ್ಟೆ ನೀನು
ಶಾಪದ ಶಿಲೆಯ ಕುಲಕೆ ತರಲಡಿಯಿಟ್ಟೆ
ಪಾಪಿ ಅಜಮಿಳನ ಅಘಗಳ ಸುಟ್ಟೆ ಸ್ವಾಮಿ
ಶ್ರೀಪದಗ್ರಸ್ತನಾದೆನ್ನ ನೀ ಕೈಬಿಟ್ಟೆ 2
ಬಿಡಬೇಡೆನ್ನ ಕೈಯ ಶ್ರೀನಿವಾಸ ಬಹು
ಬಡವ ನಾನಹುದು ಮಧ್ವಗೃಹವಾಸ
ಕಡುಪಾಪಿ ನಾನಲ್ಲವೊ ರಂಗೇಶವಿಠಲ
ದೃಢವಾಗಿ ನಂಬಿಹೆನೊ ನಿನ್ನ ಸರ್ವೇಶ 3