ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಹಿಮರೊ ನಮ್ಮ ಶ್ರೀ ಗುರುಗಳು ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ. ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು ದಾಂತತ್ವದಾ ನಡುಕಟ್ಟು ಕಟ್ಟಿಹರು ಸಂತೋಷ ಸುಖದಲಿ ಅಂತರಂಗದಿ ಹರಿಯ ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು 1 ವೈರಾಗ್ಯವೆಂತೆಂಬ ಆಯುಧವ ಧರಿಸಿಹರು ಸೇರಿದವರನು ಪೊರೆವ ಕಂಕಣವ ಕಟ್ಟಿ ನಾರಸಿಂಹನ ನಾಮ ಕರ್ಣಭೂಷಣ ಧರಿಸಿ ನಾರಾಯಣನ ಗುಣದ ಹಾರ ಧರಿಸಿಹರು 2 ಪರರಿಗುಪಕಾರವನೆಸಗುವ ಭುಜದ ಕೀರುತಿಯು ವರತತ್ವ ಅರುಹುವ ವನಮಾಲಿಕೆಯು ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು ಧರಿಸಿರುವ ಮಹಿಮರ ಸರಿಗಾಣೆ ಜಗದಿ 3 ಕುಂದದೆ ಭಕ್ತರನು ಪೊರೆಯುವ ಭಾರದ ಅಂದದಾ ಮುಕುಟ ಶಿರದಲ್ಲಿ ಧರಿಸಿ ತಂದೆ ಮುದ್ದುಮೋಹನದಾಸರೆಂದೆನಿಸುತ ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು 4 ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು5
--------------
ಅಂಬಾಬಾಯಿ