ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲಜನಾಭನ ಪೂಜೆ ಅತಿ ಸುಲಭವು ಪ ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ ತಾಳ ಕೇಳುವನಲ್ಲ ಮೇಳ ಕೇಳುವನಲ್ಲ ಬಾಳೆ ಮಾವುಗಳ ವೈಭವವ ಕೇಳುವನಲ್ಲ ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ 1 ನವರತ್ನ ಮಂಟಪದ ಝವೆಯ ಬಯಸುವನಲ್ಲ ಹವಳಗಳ ಸರದ ವೈಭವವು ಬೇಕಿಲ್ಲ ಧವಳ ಮುಕ್ತಾಹಾರಗಳ ಬಯಸುವನಲ್ಲ ಭುವನ ಭೂಷಣನೊಳತಿ ಭಕುತಿಯುಳ್ಳವಗೆ 2 ಹೊನ್ನಿನಾಭರಣಗಳನ್ನು ಬಯಸನು ವಿವಿಧ ಅನ್ನಗಳ ರುಚಿಗೆ ಲೋಭವ ಪೊಂದನು ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು