ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಲಾಲಿ ಹಾಡು) ಲಾಲಿ ರಘುಕುಲವೀರ ರಾಕ್ಷಸಗಣಾರಿ ಲಾಲಿ ಜಗದೇಕ ಸುಂದರ ಸೇತುಕಾರಿ ಲಾಲಿ ನಗಚಾಪ ಹೃತ್ಕಮಲ ಸಂಚಾರಿ ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ. ಧರಣಿ ಭಾರವನು ಬೇಗಿಳುಹಬೇಕೆಂದು ಸುರರು ನಡೆತಂದು ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು 1 ದರಚಕ್ರ ಶೇಷರನು ಸರಿಯಾಗಿ ತನ್ನಾ ವರಜಪದವೈದುತವತರಿಸಿರಲು ಮುನ್ನ ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ ಚರಣ ಸೇವಕರೆನಿಸಿ ಪೊರದಿ ಗುಣರನ್ನ 2 ಶ್ರೀ ರಾಮ ಸೀತಾವರಾಶ್ರಿತ ಪ್ರೇಮ ಮಾರುತಿಗೆ ವಿಧಿಪದವನಿತ್ತ ಗುಣಧಾಮ ಘೋರ ರಾವಣ ಮುಖ್ಯ ದಿತಿಜ ನರ್ದೂಮ ಭೂರಮಣ ಶೇಷಗಿರಿವರ ಪೂರ್ಣಕಾಮ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ1 ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ 2 ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ 3 ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ 4 ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಎಂತುನುತಿಪೆ ನಾನು-ಈ ಜಗ | ದಂತರ್ಯಾಮಿಯನು ಪ ಸಂತತ ವಾಙÁ್ಮನ ಅ.ಪ. ಸಾಸಿರ ಮುಖದವನ-ಅವಯವ-ಸಾಸಿರವುಳ್ಳವನ ಸಾಸಿರ ಪೆಸರವನ-ರೂಪಿ ಸಾಸಿರವಾಗಿಹನ ಮೀಸಲಳಿಯದಂತೀ ಸಚರಾಚರ ವಾಸಿಯಾದ ಶ್ರೀ ವಾಸುದೇವನು1 ಜಗವನು ನಿರ್ಮಿಸುವ-ಬೊಮ್ಮನು-ಮಗನೆಂದೆನಿಸಿರುವ ಬಗೆಯುವದೀಜಗವ-ಜಠರದಿ-ನುಸುಳಿಸಿಕೊಂಡಿರುವ ಮಗುಳಿದ ನಳಿಯುವ ನಗಚಾಪರಮೊಮ್ಮಗನೆಂಬುವರೀ | ಯಗಣಿತ ಮಹಿಮನ 2 ನಿಗಮವ ಪೆತ್ತವನ-ಬೊಮ್ಮಗೆ-ನಿಗಮವನಿತ್ತವನ ನಿಗಮೋದ್ಧಾರಕನ-ನಿತ್ಯದಿ-ನಿಗಮಗೋಚರನ ಬಗೆಬಗೆಯೋಗಿಗಳ ಧ್ಯಾನಕೆನುಗಳಿದ ಶ್ರೀಪದ ಯುಗಳಾಂಬುಜನನು 3 ಮಾಯಾಧೀಶ್ವರನ-ದೇವನಿ-ಕಾಯಾರಾಧಿತನ ಕಾಯಜ ಸುಂದರನಾ-ಜೀವನಿ-ಕಾಯಕೆ ಮಂದಿರನಾ ಮಾಯಾಕಾರನಿವ ನಾಯವ ನರಿಯದೆ ದಾಯಗೆಟ್ಟರ ನ್ಯಾಯದಿ ಮುನಿಗಳು 4 ಪರಮಪದದೊಳಿಹನಾ ಪುನರಪಿ- ತರಣಿಯೊಳಿರುತಿಹನ ಶರನಿಧಿ ಮಂದಿರನಾ-ಶ್ರೀ ಪುಲಿಗಿರಿಯೊಳು ನಿಂದಿಹನ ನಿರುತವು ತನ್ನಯ ಚರಣವ ನಂಬಿದ ಶರಣರ ಪೊರೆಯುವ-ವರದ ವಿಠಲನಾ 5
--------------
ಸರಗೂರು ವೆಂಕಟವರದಾರ್ಯರು
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ. ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು ರಾಗದಿನೋಡುತ ಬಗೆ ಬಗೆ ಹರ್ಷದ ನಗೆಮೊಗಹಾಸದಿ ಬಿಗಿಯುತ ಮನ ಅಗಣಿತ ಗುಣನಿಧಿ 1 ಸಾಗರನಳಿಯನೆ ಸಾಗರಶಯನನೆ ಯಾಗ ಸುಭೋಕ್ತನೆ ಯೊಗಿಗಳರಸನೆ ಬಾಗುವೆ ಚರಣದಿ ಸಾಗುತ ಮನ ಬಡ ಬಡ ನೀಗಿಸಿ ಮಲಮನದಾಗಸಗೀಗಲೆ 2 ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ ತನುಮನವೆಲ್ಲವ ಮಿನುಗಿಸಿ ಜ್ಞಾನವÀ ಧಣಧಣ ತಾಳಕೆ ಅಭಿನಯಸಹಿತದಿ ಕುಣಿಯುತ ಕುಣಿಸುತ ದಣಿಸದೆ ಕರುಣದಿ 3 ಕರ್ಜಿಸಿ ರಾಮದ ಕಜ್ಜಿಯಮನದಿಂ ಮಜ್ಜನಗೈಸುತ ಭಕ್ತಿಯಕಡಲಲಿ ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ- ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4 ಇಂದಿರೆಯರಸನೆ ಚಂದ್ರನ ಹಳಿವನೆ ಛಂದಸುವೇದ್ಯನೆ ಬಂಧ ಸುಮೋಚಕ ಬಂಧುವೆ ಸರ್ವರ ಮಂದಜಭವಪಿತ ತಂದೆಯೆ ವಿಶ್ವದ ನಂದವ ನೀಡಲು 5 ವೇದವ ತಂದವ ವೇದನ ಪೊರೆದವ ಭೂಧರ ಪೊತ್ತವ ಮಾಧವನಾದವ ಮೋದವ ತಂದವ ಖೇದವ ತರಿದವ ಮೇದಿನಿ ಪೊರೆದವ ಛೇದಿಸಿ ಬಂದವ 6 ಮೇದಿನಿ ಇತ್ತವ ಮೇದಿನಿಸುತೆಯಳ ಮೋದದಲಾಳ್ದವ ಮೇದಿನಿಸುತಹರ ವೇದವ ಕಾಯ್ದವ ಛೇದಿಸಿ ಕಲಿಗಣ ಹಾದಿಯ ತೊರುವ 7 ನಂದನಂದ ಅರವಿಂದ ನಯನ ಬಹು ಸುಂದರತಮಶ್ರೀ ಮಂದಿರ ಗೋಕುಲ ಚಂದಿರ ಶುಭಗುಣಸಾಂದ್ರ ಮಹೋಜಸ ಇಂದ್ರನ ಹಳಿದ ಮಹೇಂದ್ರ ಪರಾತ್ಪರ8 ಗೋಪಿಕಂದ ಬಹು ಗೋಪಿಕಾಮಸ್ತ್ರೀ ರೂಪಧಾರಿ ನಗಚಾಪವರದ ಶಿವ ಭಂಗ ಹರಣ ನಿ- ರ್ಲೇಪ ದುಃಖ ಸುಖಲಾಪ ಚರಿತ ಭಗ 9 ವಾಸುದೇವ ಸಂತೋಷದಾತ ಗೋಕೇಶವೇದ್ಯ ವಾಗೀಶ ಜನಕ ನಿಜದಾಸಪೋಷ ಖಳ- ದಾತ ಮಹಿ- ದಾಸಪೂರ್ಣವಿಭು 10 ವೈರಿ ಕುರುವಂಶ ಧ್ವಂಸ ನಿಜ ಹಂಸರೂಪ ಯದುವಂಶ ಚಂದ್ರ ನೀ- ಲಾಂಶುಧಾಮ ಗರುಡಂಸಗಮನ ಭವ ದಮನ ದೇವಾಂಶಗಣಪೋಷ 11 ತುಂಬಿರೆಜಯಜಯ ದುಂಧುಭಿನಾದವು ಅಂಬರಸುರಗಣ ವರ್ಷಿಸೆಕುಸುಮವ ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ ಕಂಬು ಚಕ್ರಾಂಕಿತ ಪಾಣಿಯೆಸರಸರ 12 ಮಂಗಳಮೂರ್ತಿಯೆ ಮಂಗಲ ದಾತನೆ ಅಂಗಜರಿಪುಗಳ ಭಂಗವ ಹರಿಸುತ ತಿಂಗಳು ಬೆಳಕಿನ ತುಂಗ ಸುರೂಪವ ಕಂಗಳು ಮನಸಿನ ಸಂಗದಿ ತೋರುತ13 ಸಾಸಿರ ಶಿರಮುಖ ಸಾಸಿರ ನೇತ್ರನೆ ಸಾಸಿರ ಬಾಹುವೆ ಸಾಸಿರನಾಮಕ ಸಾಸಿರಕೀರ್ತಿನಿರ್ದೋಷ ಸುಖಪೂರ್ಣ ಶ್ವಾಸವಿನುತ ವಿಶ್ವಾಸವ ಬೀರುತ 14 ಜಯಮುನಿ ಹೃದಯಗ ವಾಯು ವಿನಾಯಕ ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ ಪ್ರೇಮದ ಮನವಳಿದ ಹೇಯದು ನಿನ್ನಯ ಧೇಯವೆ ನಡೆಸುತ ಶ್ರೀ ಯವ ನೀಡಲು 15
--------------
ಕೃಷ್ಣವಿಠಲದಾಸರು
ರಾಜತಾದ್ರಿ ನಿಲಯನ | ರಜನೀಶ ಧರನತೋರೆ ಪಾರ್ವತಿಯೆ ಪ ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ 1 ವಿನುತ ನಗಚಾಪಭವನ ತೋರೆ ಪಾರ್ವತಿಯೆ 2 ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ 3
--------------
ಶಾಮಸುಂದರ ವಿಠಲ