ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ
ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ
ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ
ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ
ತಂದಿರುವರೈ ಮಹನಿಧಿ ಕನಡಿ ಧೇನುಗಳ
ನಿಂದು ಗಾನವಮಾಡುತಿರುವರಾನಂದದಿ
ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1
ದಾಸರೊಡೆ ತುಂಬುರರು ನಾರದರು ಜಯಜಯ
ಶ್ರೀಶನೇ ಕೇಶವ ಗಜವರದ ಎಂದು
ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು
ದೋಷನಾಶನ ಲೋಕಕಲ್ಯಾಣ ತ್ರಾಣ 2
ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು
ಹಿತವಾದ ಹುಗ್ಗಿ ಸಜ್ಜಿಗೆಯ ಗೈದು
ಪತಿತಪಾವನ ನಿನಗೆ ದಧ್ಯನ್ನ ನೀಡುವರೊ
ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3
ರೋಗರುಜಿನಗಳಳಿದು ಆಯುವೃದ್ಧಿಯದಾಗಿ
ಭಾಗವತ ಸಕುಟುಂಬ ಸಂತೋಷಗೂಡಿ
ಭಾಗವತ ಭಾರತ ರಾಮಾಯಣಗಳ ಹಾಡಿ
ಆಗಲೈ ಆಗಮಾರ್ಚನೆ ಆಲಯಗಳೊಳಗೆ 4
ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ
ಯಮಕಂಟವಂ ಕಳೆದು ಭ್ರಮೆಗಳನು ನೀಗಿ
ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ
ಅಮಿತ ಅಮೃತವುಣಿಸೈ 5
ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು
ಭದ್ರತೆಯನಾಡೊಳಗಸ್ಥಿರತೆಗೈಯುತ್ತ
ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ
ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6
ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು
ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು
ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7
ಎದುರು ನೋಡುತ ನದಿಯು ಹರಿವುದು ಸಾಗರಕೆ
ಮುದದಿಂದ ತಾವರೆಯು ಸೂರ್ಯನನ್ನು
ವಿಧಿವಶದಿ ಪಾಪಿಗಳು ಯಮಲೋಕವನ್ನು
ಸುಧೆಸವಿಯೆ ಭಕ್ತರು ಪರಮಪದವನ್ನು 8
ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು
ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು
ಭಕ್ತರಾಗುತ ಸರ್ವ ವಣಿಗೆಗಳು ನಡೆದು
ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9