ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು