ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ
ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು
ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು
ನಿರ್ಮಳದಲಿ ನಡಿಬೇಕು
ಪಡೆದು ಸಮದೃಷ್ಟಿಗುಡಬೇಕು 1
ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು
ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು
ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು
ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2
ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು
ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು
ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು
ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3