ವಾಯುದೇವರು - ಹನುಮಂತ
ಎಂಥ ವೈರಾಗ್ಯ ಹನುಮಂತ
ಎಂಥ ಸೌಭಾಗ್ಯ ಗುಣವಂತ ಪ
ಸಂತತ ರಾಘವನಂಘ್ರಿ ಕಮಲದಲಿ
ಅಂತರಂಗ ಭಕುತಿಯ ಬೇಡಿದೆಯೊ ಅ.ಪ
ಆವರಿಹರು ನಿನ್ಹೊರತು ರಾಘವರ
ಭಾವವರಿತು ಪ್ರತಿ ಕ್ಷಣಗಳಲಿ
ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು
ಜೀವೋತ್ತಮನದ ಬಯಸದೆ ಏಕೋ
ಭಾವದಿ ಪದಸೇವೆಯ ಕೇಳಿದ ವೀರ 1
ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ
ಷ್ಠಾನ ಪವನಸುತ ಜಗತ್ರಾಣ
ನೀನಲ್ಲದೆ ಖಗಮೃಗ ಸುರನರರುಗ
ಳೇನು ಚಲಿಸಬಲ್ಲರೊ ಹನುಮ
ಪ್ರಾಣಭಾವಿ ಚತುರಾನನ ಭುವಿಯೊಳ
ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2
ಕಪಿ ರೂಪದಿ ದಶಕಂಧರನ ಮಹಾ
ಅಪರಾಧಕ್ಕೆ ಶಿಕ್ಷೆಯನಿತ್ತೆ
ನೃಪರೂಪದಿ ದುರ್ಯೋಧನನಸುವನು
ಅಪಹರಿಸಿದೆಯೋ ಬಲ ಭೀಮ
ವಿಪುಲ ಪ್ರಮತಿ ವರವೈಷ್ಣವ ತತ್ವಗ
ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3