ಖರೆ ತವಧ್ಯಾನ ಹರಿ
ಬೇಗ ಮಾಡೆನ್ನಗೆ ನಿಜಮನನ ಪ
ಬಾಗಿವಂದಿಪೆ ನಾ ನಿಮ್ಮ ಚರಣ ಭವ
ರೋಗ ದಯದಿ ಮಾಡು ನಿವಾರಣ ಅ.ಪ
ಜಾಗರಮಾಡಿದರಹುದೇನು ನಿತ್ಯ
ಭಾಗವತನೋದಿದರಹುದೇನು
ಯಾಗಮಾಡಿದರಹುದೇನು ಮಹ
ಯೋಗ ಬಲಿಸಿದರಹುದೇನು
ಸೋಗು ಹಾಕಿ ಬೈರಾಗಿ ಆಗಿ ಇಳೆಯ
ಭೋಗವ ತ್ಯಜಿಸಿದರಹುದೇನು 1
ಸ್ನಾನಮಾಡಿದರಹುದೇನು ಬಹು
ದಾನಮಾಡಿದರಹುದೇನು
ಮೌನಮಾಡಿದರಹುದೇನು ಕೌ
ಪೀಣ ಧರಿಸಿದರಹುದೇನು
ಜ್ಞಾನ ಬೋಧಿಸುತ ನಾನಾದೇಶಗಳ
ಮಾಣದೆ ತಿರಿಗಿದರಹುದೇನು 2
ಜಪವಮಾಡಿದರಹುದೇನು ಬಲು
ಗುಪಿತ ತೋರಿದರಹುದೇನು
ತಪವ ಗೈದರಹುದೇನು ಮಹ
ವಿಪಿನ ಸೇರಿದರೆ ಅಹುದೇನು
ಚಪಲತನದಿ ಸದಾ ಅಪರೋಕ್ಷನುಡಿದು
ನಿಪುಣನೆನಿಸಿದರೆ ಅಹುದೇನು 3
ಸಾಧುವೆನಿಸಿದರೆ ಅಹುದೇನು ಚತು
ಸ್ಸಾಧನಮಾಡಿದರಹುದೇನು
ವೇದ ಪಠಿಸಿದರೆ ಅಹುದೇನು ಅಣಿ
ಮಾದಿ ಅಷ್ಟಸಿದ್ಧಿ ಅಹುದೇನು
ಓದಿತತ್ತ್ವಪದ ಛೇದಿಸಿ ಬಿಡದೆ
ಬೋಧಕನೆನಿಸಿದರೆ ಅಹುದೇನು 4
ಕೋಶನೋಡಿದರೆ ಅಹುದೇನು ಬಹು
ದೇಶ ನೋಡಿದರೆ ಅಹುದೇನು
ಆಸನಹಾಕಿದರಹುದೇನು ಮಂತ್ರ ಅ
ಭ್ಯಾಸ ಮಾಡಿದರೆ ಅಹುದೇನು
ದಾಸಪ್ರಿಯ ಭಯನಾಶ ಶ್ರೀರಾಮ ನಿಮ್ಮ
ಧ್ಯಾಸವೊಂದಿರೆ ಮುಕ್ತಿ ಸಿಗದೇನು 5