ಇನ್ನೆಲ್ಲಿತನಕ ಇವಗೆ ದುರ್ಬವಣೆ ಹರಿಯೆ ನಿನ್ನ
ಉನ್ನತವಾದ ಮರೆಬಿದ್ದ ಬಳಿಕ ಪ
ಮಂದಮತಿ ತೊಲಗದು ಕುಂದು ನಿಂದೆ ಅಳಿವಲ್ಲದು
ಮಂದಿಮಕ್ಕಳ ಮೋಹವೊಂದು ಕಡಿವಲ್ಲದು
ಸಿಂಧುಶಯನನೆ ಗೋವಿಂದ ನಿಮ್ಮ ಚರಣ
ವೊಂದೆ ಮನದಲಿ ಭಜಿಸಾನಂದಪಡಿವಲ್ಲದು 1
ಮೋಸಮರವೆ ಹರಿವಲ್ಲದು ಆಶಪಾಶ ಬಿಡವಲ್ಲದು
ಹೇಸಿ ಸಂಸಾರದ ದುರ್ವಾಸನೆಯು ಹಿಂಗದು
ದೂಷಣೆಗೆ ನೋಯುವುದು ಭೂಷಣೆಗೆ ಹಿಗ್ಗುವುದು
ದೋಷದೂರನೆ ನಿನ್ನ ಧ್ಯಾಸನಿಲ್ಲವಲ್ಲದು 2
ಕಪಟ ಮತ್ಸರಬುದ್ಧಿ
ಚಪಲತನ ಅತಿಕ್ರೋಧ ಕಪಿಮನದ ಚೇಷ್ಟೆ
ಅಪರೋಕ್ಷ ನಿಲ್ಲವಲ್ಲದು
ಅಪ್ಪ ಶ್ರೀರಾಮ ನಿಮ್ಮ ಜಪತಪ ಸಿದ್ಧಿಸವಲ್ಲದು 3