ಇನ್ಯಾಕೆ ಭವಬಾಧೆ ಇವಗೆ
ಪನ್ನಂಗಶಯನನಡಿ ಚೆನ್ನಾಗಿ ಭಜಿಪವಗೆ ಪ
ದುರಿತ ದುರ್ಗುಣಗಳನು ತರಿದೊಟ್ಟಿ ನ
ಶ್ವರದ ಸಿರಿಯನಾಪೇಕ್ಷಿಸಿದೆ ನಿರುತ ಮಾನಸದಿ
ಪರಕೆ ಪರತರವೆನಿಪ ಹರಿಯಂಘ್ರಿ ಎಡೆಬಿಡದೆ
ಸ್ಮರಿಸುತ ಮನದೊಳಗೆ ಹರುಷಬರುವವಗೆ 1
ಹೀನಸಂಸಾರದ ನಾನಾ ಸಂಪದವೆಲ್ಲ
ಶ್ವಾನನ ಕನಸಿನಂತೇನಿಲ್ಲವೆನುತ
ಜ್ಞಾನದೊಳಳವಟ್ಟು ಜಾನಕೀಶನ ಧ್ಯಾನ
ಮಾನಸದಿ ಒಲಿಸಿಕೊಂಡಾನಂದಿಸುವವಗೆ 2
ಹೇಸಿಯ ಪ್ರಪಂಚದ್ವಾಸನವನಳುಕಿಸಿ
ದಾಸಜನ ಸಂಪದವೆ ಶಾಶ್ವತವೆನುತ
ಶ್ರೀಶ ಶ್ರೀರಾಮನ ಸಾಸರನಾಮಗಳ
ಧ್ಯಾಸದ್ಹೊಗಳುತ ಸಂತೋಷದಿರುವವಗೆ 3