ದಾಸನ ಮೇಲಿಷ್ಟು ಬೇಸರವ್ಯಾಕೋ
ಶೇಷಶಯನನೆ ನಿನ್ನ ಧ್ಯಾಸದೊಳಿರುವ ಪ
ನಶಿಸಿಹೋಗುವ ಕಾಯದ್ವ್ಯಸನವನು ಪರಿಹರಿಸಿ
ಹಸನಾದ ಮತಿಯೆನಗೆ ಒಸೆದು ನೀಡೆಂದು
ನಿಶಿದಿವದಿ ನಿನ್ನಡಿಕುಸುಮಗಳನಂಬಿ ಮಾ
ನಸದಿ ಭಜಿಸಲು ಎನಗೊಶನಾಗದಿರುವಿ1
ಜಡತನದ ಸಂಸಾರ ತೊಡರೆಡರು ಕಡಿದು ಗಡ
ಜಡಮತಿಯ ತೊಡೆದೆನಗೆ ದೃಢ ನಿಶ್ಚಯವನು
ಕೊಡುಯೆಂದು ದೃಢದಿ ನಿನ್ನಡಿಗೆರಗಿ ಬೇಡಿದರೆ
ಒಡಲೊಳಗೆ ನಿಂದೆನ್ನ ಜಡತನಳಿವಲ್ಲಿ 2
ಶ್ರೀಶ ಶ್ರೀರಾಮ ನಿನ್ನ ಧ್ಯಾನಮಾಡಲು ಒಮ್ಮೆ
ಅಘ ನಾಶನಲ್ಲೇನು
ದಾಸಜನಕರುಣಾಬ್ಧಿ ದಾಸನೊಳ್ದಯವಾಗಿ
ಪೋಷಿಸೈ ತವಪಾದ ನಿಜಧ್ಯಾಸವಿತ್ತು 3