ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ
ಧ್ಯಾಸದಿ ಬಂದು ಸ್ಥಿರಮಾದ ಪ
ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು
ನಾಶನ ಜಗದಾಸೆ ಎನಗೇನೆ ಅ.ಪ
ಸುಂದರಮಾದ ಸುಸಂಧಿಯೆನಗೆ ಫಲಿಸಿತು
ಸುಕೃತ ಫಲದಿಂದೆ
ಸುಕೃತ ಫಲದಿಂದ ಎನ್ನಗೆ
ತಂದೆ ಗೋವಿಂದ ತಾನೆ ಗೋವಿಂದ 1
ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ
ಸೃಷ್ಟೀಶ ದಯದಿ ನೋಡಿದ
ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು
ನೆಟ್ಟನ ಮಾರ್ಗಕೆ ಹಚ್ಚಿದ 2
ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ
ಸಾಧ್ಯವಿಲ್ಲದ ಸುದ್ದಿ ತಿಳಿಸಿದ
ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ
ಶುದ್ಧನ್ನ ಮಾಡಿ ನಿಲಿಸಿದ 3
ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ
ಲೀಲೆ ನಾಲಗೆಮೇಲೆ ಬರೆದನೆ
ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ
ಕಾಳೆಂಬ ಕತ್ತಲ ಕಳೆದನೆ 4
ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ
ತಂತ್ರ ತಾನೆಂಬ ನಿಜ ತಿಳಿಸಿದ ಸ್ವ
ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ
ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ 5
ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ
ಪರಿಭವ ದು:ಖ ಪರಿಹರಿಸಿದ
ಪರಿಭವ ದು:ಖ ಪರಿಹರಿಸೆನಗೆ
ಸ್ಥಿರವಾದ ಪರಲೋಕದರಿವು ನಿಲಿಸಿದ 6
ಆಶದಿ ಬಿದ್ದು ನಾ ದೇಶದೇಶವ ತಿರುಗಿ
ಬೇಸತ್ತು ಬಾಯ ಬಿಡುತಿರ್ದೆ
ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ
ಲೇಸಾದ ಪದವಿ ತೋರಿಸಿದ 7
ಜಗಸುಖಕೊಲತಿದ್ದೆ ಜಗದಾತ್ಮನು ಈಗ
ಜಗದ್ಹಗರಣ ತೋರಿಸ ನಗಿಸಿದ
ಹಗರಣ ತೋರಿಸಿ ನಗಿಸಿದಚಲಸೌಖ್ಯ
ಬಗೆ ತೋರಿ ಜಗಸುಖ ಮರೆಸಿದ 8
ಏನೆಂದು ಪೇಳಲಿ ಸಾನಂದನುತ ಮಹ
ದಾನಂದದಾಲಯ ಪೊಗಿಸಿದ
ಆನಂದದಾಲಯ ಪೊಗಿಸೆನ್ನ ವದನದಿ
ತಾ ನಿಂದು ನಿಖಿಲ ನುಡಿಸಿದ 9
ಭವಭಯಹರಿಸುವ ಸವಿನುಡಿಗಲಿಸಿದ
ಭವರೋಗದ್ವೈದ್ಯ ಮಮಪಿತ
ಭವರೋಗದ್ವೈದ್ಯ ಮಮಪಿತ ಮುಂದಿನ್ನು
ಸಾವ್ಹುಟ್ಟೋಭೀತಿ ಎನಗಿಲ್ಲ 10
ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ
ಮತ್ರ್ಯದ ಗುಣವ ತೊಡೆದೆನ
ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ
ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ 11