ಅಸೂಯೆ ಬಿಡಿಸೆನ್ನ ಮನಸಿನ
ಅಸೂಯೆ ಬಿಡಿಸೆನ್ನ ಪ
ಅಸೂಯೆ ಬಿಡಿಸೆನ್ನ ಹೇಸಿಮನಸಿನ
ಈಶ ನಿನ್ನಪಾದ ದಾಸಾನುದಾಸೆನಿಸೋ ಅ.ಪ
ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು
ಅಟ್ಟಿದರಷ್ಟೆನಿಸೋ
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ
ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ 1
ಕಡುಸಿರಿ ಅಷ್ಟೆನಿಸೋ ಎನಗೆ ಬಂದ
ಬಡತನ ಅಷ್ಟೆನಿಸೋ
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ
ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ2
ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ
ಧ್ಯಾಸದಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ 3