ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ಪ್ರಾಣನಾಥನೇ ಬಹು ತ್ರಾಣತಪ್ಪಿದೆ ಎನ್ನ ತ್ರಾಣವಾಗೊಟ್ಟು ಪೊರಿಯೋ ಪ ಕ್ಷೋಣಿತಳದಿ ದುಗ್ಗಾಣಿ ಕಾಣದೀಪರಿ ಕ್ಷೀಣನಾಗಿ ನಾ ಬಂದೆ ಮುಖ್ಯ ಪ್ರಾಣನಾಥನೆ ಅ.ಪ ದೀನಜನಕೆ ಸುರಧೇನುವರನೆನಿಸಿ ದೀನರ ಪೊರೆಯದಿರಲು ಜ್ಞಾನಿಗಳಿದಕನುಮಾನ ಮಾಡದೆ ತಮ್ಮ ಮಾನಸದಲಿ ನಿನ್ನಾ ಧ್ಯಾನಿಸುತಿಹರೈ 1 ವಾಣೀಪತಿಯೆ ಪಂಚಾನನಾದ್ಯಣುರೇಣು ಕೊನೆಯಾಗಿಪ್ಪಾ ಜಗಕೆ ಪ್ರಾಣ ಗುಣ ಧನ ತ್ರಾಣ ಮೊದಲಾದ ಕ್ಷೀಣ ಸಂಪದವ ಕೊಡುವೆ ಮುಖ್ಯ 2 ದಾತಾ ನೆನಿಸಿದೆ ಧಾತಾನಾಂಡಕೆ ಭಾವಿ ವಿ - ಧಾತಾ ನೀನಹುದೈ ಧಾತಾ ಪ್ರಮುಖಸುರನಾಥಾ ಗುರು ಜಗ ನ್ನಾಥಾ ವಿಠಲ ಪ್ರಿಯನೇ ಮುಖ್ಯ 3
--------------
ಗುರುಜಗನ್ನಾಥದಾಸರು