ಲೋಕನೀತಿ
ಅಚ್ಯುತಾನಂತ ಗೋವಿಂದ
ಅಕ್ಷರೊತ್ತಮ ಸದಾನಂದ ಪ.
ನಿಶ್ಚಲ ಭಕ್ತಿಯಿಂ ಮೆಚ್ಚಿಸು ಹರಿಯಂ
ನಿಶ್ಚಯ ಪೋಪುದು ಭವಬಂಧ ಅ.ಪ.
ಆಧಿವ್ಯಾಧಿಹರಣ ಕಾರಣ ಮಧು
ಸೂದನ ಸತ್ಯ ಸದ್ಗುಣವೃಂದ
ವೇದಗಮ್ಯ ಪ್ರಹ್ಲಾದ ಕ್ಷೇಮದ ಮ-
ಹೋದಧಿಶಯನ ಮುಕುಂದ 1
ಶ್ರೀಬ್ರಹ್ಮಾದಿ ದಿವಿಜಕುಲವಂದಿತ
ಶೋಭಿತ ಪಾದಾರವಿಂದ
ಈ ಭೂಮಿಯೊಳಗೆ ಜನಿಸಿದಕೆ ಸಫಲ
ಲಾಭವೆ ಹರಿಕಥಾನಂದ 2
ಪ್ರಾಣನಿಯಾಮಕ ಸರ್ವತ್ರ ವ್ಯಾಪ್ತ
ಧ್ಯಾನಿಸದಿರು ನೀ ಬೇರೊಂದ
ದೀನವತ್ಸಲ ಸುಮ್ಮಾನದಿ ಕಾವ ಲ-
ಕ್ಷ್ಮೀನಾರಾಯಣ ದಯದಿಂದ 3