ಧರ್ಮದ ನೀತಿಯ ಅರಿತೇನು
ಮರ್ಮದ ರೀತಿಯ ತಿಳಿದೇನು ಪ
ಧರ್ಮಕರ್ಮಗಳು ಹರಿಗರ್ಪಣವೆಂದು
ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ
ಗಂಗಾಸ್ನಾನವ ಮಾಡಿದರೇನು
ಅಂಗುಲಿಯೂರುವ ಯೋಗದೊಳೇನು
ಪಂಗನಾಮ ಬೂದಿಯ ಬಳಿದೇನು
ರಂಗನ ಸ್ಮರಿಸದ ಮನವಿದ್ದೇನು 1
ದೇಶ ದೇಶಂಗಳ ತಿರುಗಿದರೇನು
ಆಶೆಯ ಬಿಡದ ಕಾಷಾಯದಿಂದೇನು
ಕಾಶಿರಾಮೇಶ್ವರಕೋಡಿದರೇನು
ಶ್ರೀಶನನಾಮವೇ ಗತಿಯೆನದವನು 2
ಚಿತ್ತದಿ [ನೆನೆದರೆ] ಹರಿ ಕಿರಿದೇ
ಸತ್ತು ಹುಟ್ಟುವುದೇ ಜಗದೊಳು ಹಿರಿದೇ
ಎತ್ತೆತ್ತಲು ಹರಿಯಿಹನೆನಬಾರದೇ
ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3