ನೋಡಿ ದಣಯೆನೊ ರಂಗ ನಾ
ಹಾಡಿ ದಣಿಯೆನೊ ನಾ
ಜೋಡು ಕುಂಡಲಧರ ನೀನಾಡಿದಾಟಗಳೆಲ್ಲ ಪ.
ದೇವಕಿ ನಿನ್ನ ಬಾಲಲೀಲೆ ತೋರೆನಲಾದೇವ
ಮೊಸರ ಭಾಂಡವನೊಡೆದ
ಭಾವಜನ್ನಯ್ಯ ಕಡೆಗೋಲು ನೇಣಿನ ಸಹ
ರುಕ್ಮಿಣೀದೇವಕಿಗ್ಹರುಷವನಿತ್ತು 1
ಅಂದು ಯಶೋದೆ ನಿನ್ನ ಅಂದದ ಮದುವೆಯ
ತಂದು ತೋರೆನೆ ವೇಂಕಟನಾಗಿ
ಕಂದನೆನಿಸಿ ಬಕುಳೆಗೆ ಮದುವೆಯ
ಅಂದದಿ ತೋರಿದೆ ತಂದೆಯಾದವ ಕೃಷ್ಣ 2
ತೊಡೆಯಲೆತ್ತಿ ನಿನ್ನ ಸಡಗರದಿಂದಲಿ
ಇಡುವಳೊ ಸಕಲಾಭರಣಗಳ
ಮೃಢಸಖ ಶ್ರೀ ಶ್ರೀನಿವಾಸನೆ ಎನ್ನನು
ಕಡೆಹಾಯಿಸೆಂದು ಬಿಡದೆ ಧ್ಯಾನಿಪಳೊ 3