ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ
ಮಾನಸಾನಂದಿಸೋ ಶತಭಾನುತೇಜನೆ ಪ
ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ
ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ
ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ
ವಂದನೆಯ ಮಾಡುವೆನಯ್ಯಾ ಇಂದುವದನಾ
ಇಂದುಧರ ನುತ ಮುಚುಕುಂದವರದನೆ ಗುಣ
ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ1
ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು
ದುಷ್ಟಮನುಜರ ಕೂಡಿ ಭ್ರಷ್ಟನಾದೆನು
ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ
ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2
ಲೋಕಪತಿ ಪಿನಾಕೆಯನ್ನು ವೃಕನೆಂಬ
ಭೀಕರಾಸುರನು ಉರಿಹಸ್ತ ಬೇಡಲು
ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ
ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ3
ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ
ಮೂರ್ತಿ ಬೇಡಿಸದಿರು
ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ
ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4
ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ
ಭೂಷಿತ ಲಲಿತಶುಭ ವೇಷವಿಪುಲ
ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ
ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ5